ಮಂಡ್ಯ: ಮಂಡ್ಯ ಜಿಲ್ಲೆ ಹೃದಯಕ್ಕೆ ಹತ್ತಿರವಾದ ಜಿಲ್ಲೆ. ನನ್ನ ವೃತ್ತಿ ಜೀವನವನ್ನು ಜಿಲ್ಲೆಯ ಬೆಸಗರಹಳ್ಳಿ ಪ್ರೌಢಶಾಲೆಯ ಶಿಕ್ಷಕಿಯಾಗಿ ಆರಂಭಿಸಿದೆ ಎಂದು ನಿಕಟಪೂರ್ವ ಅಪರ ಜಿಲ್ಲಾಧಿಕಾರಿ ವಿ.ಆರ್. ಶೈಲಜಾ ತಿಳಿಸಿದರು.
ನಗರದ ಕರ್ನಾಟಕ ಸಂಘದಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘ ಬೆಂಗಳೂರು, ದ್ವಿ.ದ.ಸ.ಮತ್ತು ಲಿ. ನೌ.ಸಂಘ ದಾವಣಗೆರೆ, ಗ್ರಾಮಲೆಕ್ಕಾಧಿಕಾರಿಗಳ ಸಂಘ, ಗ್ರಾಮ ಸಹಾಯಕರ ಸಂಘ, ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ವೃತ್ತಿ ಜೀವನದಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಉತ್ಸಹವನ್ನು ನೀಡಿದೆ. ಈ ಜಿಲ್ಲೆಯು ನಾಯಕತ್ವ ಗುಣ ಬೆಳೆಸುತ್ತದೆ ಎಂದ ಅವರು, ಇಂದಿನ ಕಾರ್ಯಕ್ರಮ ನನಗೆ ಇನ್ನಷ್ಟು ಕೆಲಸ ಮಾಡಲು ಪ್ರೋತ್ಸಾಹ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಉತ್ಸವ ಕಾರ್ಯಗಳು ರೈತರ ಪರ, ಚುನಾವಣೆ, ದಸರಾ,ಕಂದಾಯ ಅದಾಲತ್, ಪಿ.ಎಂ.ಕಿಸಾನ್ ಯೋಜನೆಗಳು ಹೀಗೆ ಅನೇಕ ಕೆಲಸ ಕಾರ್ಯಗಳನ್ನು ಮಾಡಿದಂತಹ ಅನುಭವ ಹಾಗೂ ತಹಸೀಲ್ದಾರ್, ಉಪವಿಭಾಗಾಧಿಕಾರಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ನನಗೆ ಖುಷಿ ನೀಡಿದೆ.
ಮಂಡ್ಯದಲ್ಲಿ 5 ವರ್ಷ ಸೇವೆಯ ಪಯಣವನ್ನು ಮರೆಯಲು ಸಾಧ್ಯವಿಲ್ಲ. ಇದಕ್ಕೆ ಮೂಲ ಕಾರಣ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಸಹೋದ್ಯೋಗಿಗಳಾಗಿ ಸಹಕರಿಸಿದ ಉಪ ತಹಸೀಲ್ದಾರರು, ತಹಸೀಲ್ದಾರರು, ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಕಚೇರಿಯ ಸಿಬ್ಬಂದಿಗಳಿಗೆ ಅಭಿನಂದನೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಮಾತನಾಡಿ, ಉತ್ತಮ ಕೆಲಸ ಮಾಡಿದರೆ ಜನರಿಗೆ ಒಳ್ಳೆಯದಾಗುತ್ತದೆ ಜನ ಸಾಮಾನ್ಯರ ಮನಸಿನಲ್ಲಿ ಉಳಿಯುತ್ತದೆ. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಉತ್ತಮ ಕೆಲಸ ಮಾಡೋಣ ಎಂದರು.
ಇನ್ನು ಸಾಮಾನ್ಯವಾಗಿ ಕೆಲಸ ನಿರ್ವಹಿಸುವಾಗ ಒತ್ತಡ ಇರುತ್ತದೆ. ಆದರೆ ಸಾರ್ವಜನಿಕರ ಪ್ರೀತಿಗೆ ಎಂದಿಗೂ ದ್ರೋಹ ಮಾಡದೆ ಇರುವ ಹಾಗೆ ಉತ್ತಮ ಕೆಲಸವನ್ನು ಮಾಡಿರುವ ಶೈಲಜಾ ಅವರಿಗೆ ಅಭಿನಂದನೆಯನ್ನು ಸಲ್ಲಿಸಿಸುತ್ತೇನೆ ಎಂದರು.
ಹಿರಿಯರ ಅಧಿಕಾರಿಗಳ ಮಾರ್ಗದರ್ಶನದಿಂದ ಹಾಗೂ ಅವರ ಸಹಕಾರದಿಂದ ಕರ್ತವ್ಯ ನಿರ್ವಹಿಸುತ್ತಾ ಸಾಗೋಣ. ನಮ್ಮ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಇಲಾಖೆಯ ಸಮಸ್ಯೆಯಾಗಲಿ ಅದರ ಭಾಗವಾಗಿ ನಿಂತುಕೊಂಡು ಅದಕ್ಕೆ ಪೂರಕವಾಗಿ ಜನರ ಕೆಲಸವನ್ನುಮಾಡುವುದಕ್ಕೆ ಇಷ್ಟ ಪಡುತ್ತೇನೆ ಎಂದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹ ಕಾಧಿಕಾರಿ ಶಾಂತಾ ಎಲ್.ಹುಲ್ಮನಿ,ಜಿಲ್ಲಾಧಿಕಾರಿಗಳ ಕಛೇರಿಯ ಹಿರಿಯ ಉಪ ತಹಶೀಲ್ದಾರರಾದ ಸ್ವಾಮಿಗೌಡ,ತಹಶೀಲ್ದಾರ್ ಗಳಾದ ಕುಂಇ ಅಹಮದ್, ನರಸಿಂಹಮೂರ್ತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಗೌಡ,ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.