ಬೆಂಗಳೂರು: ಸಾರಿಗೆ ನೌಕರರ ವೇತನ ಅಗ್ರಿಮೆಂಟ್ ಆಗಿಹೋಗಿದೆ ಶೇ.18ರಷ್ಟು ವೇತನ ಹೆಚ್ಚಳವಾಗಿ ಜಾರಿಯಾಗಿಲಿದೆ. ಮತ್ತೆ ವಜಾಗೊಂಡ ನೌಕರರನ್ನು ಬೇಸರತ್ತಾಗಿ ಮರು ನೇಮಕ ಮಾಡಿಕೊಳ್ಳಲಾಗುವುದು… ಇತ್ಯಾದಿಯಾಗಿ ಸಾಮಾಜಿಕ ಜಾಲತಾಣದಲ್ಲಿ ನೌಕರರ ದಿಕ್ಕು ತಪ್ಪಿಸುವ ಸುದ್ದಿಯೊಂದು ಹರಿದಾಡುತ್ತಿದೆ. ಇದು ಫೇಕ್ ನ್ಯೂಸ್ ಆಗಿದೆ.
ಅದರಲ್ಲಿರುವುದು ಏನೆಂದರೆ ಮುಷ್ಕರದ ಸಮಯದಲ್ಲಿ ವಜಾಗೊಂಡ ಕಾಯಂ ನೌಕರರನ್ನು ಒಂದು ವಾರ್ಷಿಕ ವೇತನ ಬಡ್ತಿ ಕಡಿತ ದೊಂದಿಗೆ ಬೇಷರತ್ ಮರು ನೇಮಕಾತಿ, 2020ರ ವೇತನ ಪರಿಷ್ಕರಣೆ ಶೇ.18 ಜಾರಿ ಮಾಡಲಾಗುವುದು.
ಸರ್ಕಾರ ಹಾಗೂ ಸಂಸ್ಥೆ ನಷ್ಟದಲ್ಲಿರುವ ಕಾರಣ ವೇತನ ಪರಿಷ್ಕರಣೆ 2022 ಜನವರಿಯಿಂದ ಜಾರಿ ಎಂಟು ತಿಂಗಳ ಹಿಂಬಾಕಿ ಮಾತ್ರ ಕೊಡುವುದು ಅನ್ನೋ ತೀರ್ಮಾನ ನಾಳೆ ಅಥವಾ ನಾಡಿದ್ದು ಒಳಗೆ ಸರ್ಕಾರದಿಂದ ಆದೇಶ ಶೇ.100 ಹೊರಬೀಳುವ ಸಂಭವವಿದೆ.
ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು. ಆದರೆ, ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂಬುದರ ಬಗ್ಗೆ ವಿಜಯಪಥ ಸತ್ಯಶೋಧನೆಗೆ ಇಳಿದಾಗ ಇದು ಪಕ್ಕ ಸುಳ್ಳು ಸುದ್ದಿ ಎಂಬುವುದು ತಿಳಿದು ಬಂದಿದೆ.
ಇದನ್ನು ಯಾರೋ ಕಿಡಿಗೇಡಿಗಳು ಮಾಡಿದ್ದು, ಈ ರೀತಿಯ ಯಾವುದೇ ತೀರ್ಮಾನವನ್ನು ನಿಗಮವಾಗಲಿ ಅಥವಾ ಸರ್ಕಾರವಾಗಲಿ ತೆಗೆದುಕೊಂಡಿಲ್ಲ. ಇಂಥ ಸುಳ್ಳು ಸುದ್ದಿಗಳನ್ನು ಹರಿಯಬಿಟ್ಟು ಕೆಲ ಕಿಡಿಗೇಡಿಗಳು ನೌಕರರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಲು ಹೊರಟಿದ್ದಾರೆ ಅಷ್ಟೆ.
ಅಲ್ಲದೆ ಈ ರೀತಿ ಅಗ್ರಿಮೆಂಟ್ ಆಗಿದೆ ಎಂದರೆ ನೌಕರರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದರ ಲೆಕ್ಕಚಾರದಲ್ಲಿ ಕೆಲವರು ಫೇಕ್ ಸುದ್ದಿಯನ್ನು ಹರಿಯ ಬಿಟ್ಟಿದ್ದಾರೆ ಎಂದು ನೌಕರರು ಅನುಮಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಲವರು ಇಂಥ ಹೇಳಿಕೆಗಳನ್ನು ಹರಿಯ ಬಿಡುತ್ತಾರೆ. ಅದು ಯಾರು ಬಿಟ್ಟಿದ್ದು ಎಂದು ಕಂಡು ಹಿಡಿಯುವಷ್ಟರದಲ್ಲಿ ತುಂಬ ಸಮಯ ತೆಗೆದುಕೊಳ್ಳಬಹುದು ಮತ್ತೆ ಈ ರೀತಿಯ ಸುದ್ದಿಗಳಿಗೆ ಅಪ್ಪ ಅಮ್ಮ ಇರುವುದಿಲ್ಲ ಬಾಯಿಗೆ ಬಂದಿದ್ದು ಒಂದಷ್ಟು ಗೀಚಿ ನಂತರ ತಮ್ಮ ಖಾತೆಯಿಂದ ಡಿಲಿಟ್ ಮಾಡಿಬಿಟ್ಟು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಇರುತ್ತಾರೆ.
ಹೀಗಾಗಿ ಇದನ್ನು ಹರಿಯ ಬಿಟ್ಟವರು ಯಾರು ಎಂಬುದನ್ನು ಪತ್ತೆ ಮಾಡುವುದು ಕೂಡ ಕಷ್ಟಸಾಧ್ಯವಾಗಿರುವುದರಿಂದ ಇಂಥ ಫೇಕ್ ನ್ಯೂಸ್ ಬಗ್ಗೆ ನೌಕರರು ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ ಎಂದು ಅಧಿಕಾರಿಕಾರಿಗಳು ಹೇಳಿದ್ದಾರೆ.
ಇನ್ನು ಕಳೆದ 2020ರಲ್ಲೇ ನೌಕರರ ವೇತನ ಹೆಚ್ಚಳವಾಗಬೇಕಿದ್ದು ಆ ಬಗ್ಗೆ ಈವರೆಗೂ ಸರ್ಕಾರ ತುಟಿ ಬಿಚ್ಚಿಲ್ಲ ಜತೆಗೆ ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಪಡೆಯುವುದರಲ್ಲೇ ಮುಳುಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು ಆ ಬಗ್ಗೆಯೂ ಯಾವುದೇ ಕ್ರಮ ಜರುಗಿಸದೆ ತೆಪ್ಪಗಿದೆ.
ಇನ್ನು 2020ರ ಜನರವರಿಯಲ್ಲೇ ಆಗಬೇಕಿದ್ದ ವೇತನ ಹೆಚ್ಚಳ ಈವರೆಗೂ ಆಗದಿರುವುದಕ್ಕೆ ಬಹುತೇಕ ಎಲ್ಲ ನೌಕರರು ಸರ್ಕಾರದ ನಡೆ ವಿರುದ್ಧ ಕಿಡಿಕಾರುತ್ತಿದ್ದಾರೆ. ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಮಂತ್ರಿ ಶ್ರೀರಾಮುಲು ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯರ ನೀಡುತ್ತಿಲ್ಲ.