ಬಿಎಂಟಿಸಿ ಚನ್ನಸಂದ್ರ ಡಿಪೋ ಚಾಲಕ ಆತ್ಮಹತ್ಯೆಗೂ ಮುನ್ನ ಬರೆದ ಡೆತ್‌ನೋಟ್ ಪತ್ತೆ- ಅಧಿಕಾರಿಗಳ ಕಿರುಕುಳಕ್ಕೆ ನೊಂದು ನೇಣಿಗೆ ಕೊರಳೊಡ್ಡಿದ್ದ ನೌಕರ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚನ್ನಸಂದ್ರ ಘಟಕ 21ರ ಚಾಲಕರೊಬ್ಬರು ಡಿಪೋದಲ್ಲೇ ಮರಕ್ಕೆ ನೇಣುಬಿಗಿದುಕೊಂಡು ಸೋಮವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಅಧಿಕಾರಿಗಳ ಕಿರುಕುಳವೆ ಕಾರಣ ಎಂದು ತಿಳಿದು ಬಂದಿದೆ.
ಹೊಳೆ ಬಸಪ್ಪ ಎಂಬುವರೆ ಡಿಪೋ ಒಳಗೆ ಇರುವ ಮರಕ್ಕೆ ಇಂದು ಸುಮಾರು 12 ಗಂಟೆ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಚಾಲಕರು. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಇರುವುದಾಗಿ ಹೇಳಲಾಗುತ್ತಿದೆ.
ಬಿಎಂಟಿಸಿ ಚನ್ನಸಂದ್ರ ಡಿಪೋನ ಮರಕ್ಕೆ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದ ವೇಳೆ ವೈದ್ಯರಿಗೆ ಡೆತ್‌ನೋಟ್ ಸಿಕ್ಕಿದ್ದು, ಅದನ್ನು ಪೊಲೀಸರಿಗೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅದರಲ್ಲಿ ಏನು ಬರೆದಿದ್ದಾರೆ ಎಂಬುವುದನ್ನು ಇನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.
ಆದರೆ ಈ ಆತ್ಮಹತ್ಯೆಗೆ ಏನು ಕಾರಣ ಎಂಬುದನ್ನು ತಿಳಿದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಅಧಿಕಾರಿಗಳು ನೇಣುಹಾಕಿಕೊಂಡಿದ್ದ ಸ್ಥಳದಲ್ಲಿ ಸರಿಯಾಗಿ ಮಹಜರ್ ಮಾಡುವ ಮುನ್ನವೇ ಬಾಡಿ ಇಳಿಸಿ ಆಸ್ಪತ್ರೆಗೆ ಸಾಗಿಸಿದರು ಎಂಬ ಆರೋಪವನ್ನು ನೌಕರರು ಮಾಡಿದ್ದಾರೆ.
ವಿಷಯ ತಿಳಿದು ಮಾಧ್ಯಮದವರು ಸ್ಥಳಕ್ಕೆ ಹೋದಾಗ ಡಿಪೋ ಭದ್ರತಾ ಸಿಬ್ಬಂದಿ ಮಾಧ್ಯಮದವರನ್ನು ಒಳಗೆ ಬಿಡದೆ ಡಿಪೋದಿಂದ 100 ಮೀಟರ್ ದೂರದಲ್ಲಿ ನೀವು ಇರಬೇಕು ಎಂದು ದಮ್ಕಿ ಹಾಕಿದರು. ಈ ವೇಳೆ ಮಾಧ್ಯಮದವರು ಆ ರೀತಿಯ ಯಾವುದಾದರು ಲಿಖಿತವಾದ ನಿಬಂಧನೆಯಿದ್ದರೆ ಕೊಡಿ ಎಂದು ಕೇಳಿದರೂ ಸಿಬ್ಬಂದಿ ಉದ್ದಟತನದಿಂದ ವರ್ತಿಸಿದರು.
ನಾವು ವಿಧಾನ ಸೌಧಕ್ಕೂ ಹೋಗಲು ಅನುಮತಿ ಇದೆ. ಆದರೆ ನೀವು ಡಿಪೋ ಒಳಗೆ ಬರಬೇಡಿ 100 ಮೀಟರ್ ದೂರದಿಲ್ಲಿರಬೇಕು ಎಂದು ಹೇಳುತ್ತಿದ್ದೀರಲ್ಲ. ನಾವು ಯಾರ ಪರ ಅಥವಾ ವಿರುದ್ಧವಾಗಿ ವರದಿ ಮಾಡಲು ಬಂದಿಲ್ಲ. ಒಬ್ಬ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ತಿಳಿದು ವರದಿ ಮಾಡಲು ಬಂದಿದ್ದೇವೆ ಎಂದು ಹೇಳಿದ ಬಳಿಕ ಪೊಲೀಸರು ಮಧ್ಯೆ ಪ್ರವೇಶ ಮಾಡಿ ವರದಿ ಮಾಡಲು ಅವಕಾಶ ಮಾಡಿಕೊಟ್ಟರು.
ಅಂದರೆ ಸಾರಿಗೆ ನಿಗಮಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಲಂಚಬಾಕತನ, ನೌಕರರಿಗೆ ಕೊಡುತ್ತಿರುವ ಕಿರುಕುಳ ಬೇರೆ ಯಾವ ನಿಗಮ ಮಂಡಳಿ ಮತ್ತು ಇಲಾಖೆಗಳಲ್ಲೂ ಇಲ್ಲ. ಅಷ್ಟರ ಮಟ್ಟಿಗೆ ಸಾರಿಗೆ ನಿಗಮಗಳಲ್ಲಿ ನೌಕರರನ್ನು ಕಾಡುತ್ತಿದ್ದಾರೆ ಕೆಲ ಭ್ರಷ್ಟ ಅಧಿಕಾರಿಗಳು.
ಇನ್ನು ಸತ್ಯ ಮರೆಮಾಚಲು ಏನುಬೇಕೋ ಅದೆಲ್ಲವನ್ನು ಮಾಡುವ ಸಲುವಾಗಿಯೇ ಸಾರಿಗೆ ನಿಗಮದಲ್ಲಿ ಕೆಲ ಅಧಿಕಾರಿಗಳು ವೇತನ ಪಡೆಯುತ್ತಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. ಆದರೆ ಸಾರಿಗೆ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ಈ ಬಗ್ಗೆ ಗುಲಗಂಜಿಯಷ್ಟು ತಲೆಕಡೆಸಿಕೊಂಡಿಲ್ಲದಿರುವುದು ಸೋಜಿಗವಾಗುತ್ತಿದೆ.