ಕಾವಿ ಧರಿಸಿದ ಭೂತವೊಂದು ಮಠದ ಆವರಣದಲ್ಲಿ ಭಗವದ್ಗೀತೆಯ ನಿತ್ಯ ಪಠಿಸುತ್ತಿತ್ತು. ಅನ್ನದಾಸೋಹದ ನೆಪದಿ, ಬಡವರ ಹೆಣ್ಣುಮಕ್ಕಳ ಹುರಿದು ಹುರಿದು ಮುಕ್ಕುತ್ತಲೇ ಇತ್ತು.
ದೊಡ್ಡ ಎಸ್ಕಾರ್ಟು, ಸಾಲು ಸಾಲು ಕಾರುಗಳಲಿ ಕಾಣಿಕೆಗಳ ಹೊತ್ತು ಬರುವ ಹಾರ ತುರಾಯಿಗಳ ಜೊತೆಗೆ ಹಣದ ಕಟ್ಟು ತರುವ ಖಾದಿಗಳು ಶರಣು ಶರಣೆನ್ನುವದ ನೋಡಿ ಅಮಾಯಕ ಭಕ್ತವರ್ಗವೊಂದು ದೆವ್ವದ ಕಾಲಿಗೆ ಎರಗುತ್ತಿತ್ತು.
ಒಳಗೊಳಗೆ ನಗುತ ಮೋಜು ಮಸ್ತಿಗಳಲ್ಲಿ ಪಾದಕೆರಗುವ ಮಸ್ತಕಗಳ ಮೌಢ್ಯಕ್ಕೆ ಭೂತ ನಸುನಗುತ ಬಾಯಿ ಚಪ್ಪರಿಸುತ್ತಿತ್ತು. ಖಜೂರಿ, ಹಾಲು ಗೋಡಂಬಿ, ಖಾರೀಕಗಳ ತಿಂದು ತನ್ನ ಬಾಳೆಯ ಹಣ್ಣಿಗೆ ಹುಣ್ಣಾಗದಂತೆ ತೃಷೆಯ ತೀರಿಸಿಕೊಳ್ಳುವ ತವಕ ಅದರೊಳಗೆ ಇತ್ತು.
ಕಾವಿ ಬಟ್ಟೆಯ ಒಳಗೆ ಅರವತ್ತರ ದೆವ್ವವೊಂದು ತನ್ನ ಕರ್ಮಗಳ ಮುಚ್ಚಿಟ್ಟು ನಗು ಚೆಲ್ಲುತ್ತಿತ್ತು. ಬಾಯಿ ತೆರೆದರೆ ಲಿಂಗ ಧರ್ಮ ರಾಜಕಾರಣದ ಮಾತು, ಅಂಗಮರ್ಧಣಕ್ಕೆ ಸಂಚುಗಳ ಹೂಡುತಿತ್ತು.
ತುಂಬಿದ ಬಸುರು ನಿಲ್ಲದ ಲೋಕವಿದು. ಇನ್ನು ಮಠದ ಗುಟ್ಟುಗಳದೇನು ಬಿಡಿ, ಮಾಡಿಟ್ಟ ಆಸ್ತಿ, ಒಲಿದು ಬಂದ ಸನ್ಮಾನಗಳು, ವೈಭೋಗದ ಬದುಕು ಕಾವಿಯೊಳಗೂ ಕಾಮದ ಪಿತ್ತ ನೆತ್ತಿಗೇರಿಸುತಲಿತ್ತು…
ಕೊನೆಗೂ ಕಾಶಿಗೆ ಹೊರಟು ಇಲಿಗಳ ದಾಸರಾಗಿಸಿಕೊಂಡ ಬಣ್ಣ ಬಯಲಾದ ಮಠದ ಬೆಕ್ಕಿನ ಕಥೆಯಿದು. ನೊಂದ ಇಬ್ಬರು ಹುಡುಗಿಯರ ವ್ಯಥೆ ಹೇಗೋ ಹೊರಗೆ ಬಿತ್ತು. ಕಾವಿ ಕಳಚಿದ ದೆವ್ವ, ಬಿಳಿ ಬಟ್ಟೆಗಳ ಧರಿಸಿ ಮುಖವ ಮರೆ ಮಾಚಿದೆಯಷ್ಟೇ.
ಜೈಲೆನ್ನುತ್ತಲೇ ಭೀಕರ ಎದೆಯ ನೋವಂತೆ ಪಾಪ ನಲುಗಿ ಹೋಗಿದೆ ದೆವ್ವ ನಡುಗುತ್ತಿದೆಯಂತೆ. ಕೊಳ್ಳಿ ದೆವ್ವದ ರಕ್ಷಣೆಗೆ ಅಲವತ್ತುಕೊಳ್ಳುತ್ತಿವೆ ಈಗ ಮರಿ ದೆವ್ವಗಳು. ದೊಡ್ಡ ದೆವ್ವ ಜಾಮೀನು ಅರ್ಜಿಯ ಕೂಗು ಹಾಕುತ್ತಲೇ ಇತ್ತು..
ಯುದ್ಧಕ್ಕೂ ಸನ್ನದ್ದವಂತೆ ಶಾಂತಿಗೂ ಬದ್ಧವಂತೆ ರಾಜಿ ಸಂಧಾನದ ಮಾತು ಹೇಳುತಿತ್ತು. ಕೊನೆಗುಳಿದ ಪ್ರಶ್ನೆ ಇಷ್ಟೇ ಬಡವರಿಗೊಂದು ನ್ಯಾಯ!? ಬಲ್ಲಿದರಿಗೆ ಇನ್ನೊಂದು. ಕಾನೂನು ಇಷ್ಟೊಂದು ಸಡಿಲಾಗಬಾರದಿತ್ತು ಕಾನೂನು ಇಷ್ಟೊಂದು… ಸಡಿಲಾಗಬಾರದಿತ್ತು….
l ದೀಪಕ ಶಿಂಧೇ
Mo: 9482766018