ಪಿರಿಯಾಪಟ್ಟಣ: ಮುಂದಿನ ಚುನಾವಣೆಯಲ್ಲಿ ಮುದ್ದನಹಳ್ಳಿ ಗ್ರಾಮಸ್ಥರು ನನಗೆ ಬೆಂಬಲ ನೀಡಿ ಹೆಚ್ಚಿನ ಮತಗಳ ಹಂತರದಿಂದ ಗೆಲ್ಲಿಸಿಕೊಟ್ಟರೆ ಮುದ್ದನಹಳ್ಳಿ ಗ್ರಾಮವನ್ನು ತಾಲೂಕಿನಲ್ಲಿಯೇ ಮಾದರಿ ಗ್ರಾಮವನ್ನಾಗಿ ಮಾಡುತ್ತೇನೆ ಎಂದು ಶಾಸಕ ಕೆ. ಮಹದೇವ್ ಹೇಳಿದ್ದಾರೆ.
ತಾಲೂಕಿನ ಮುದ್ದನಹಳ್ಳಿ, ಪಂಚವಳ್ಳಿ, ಈಟಗಳ್ಳಿ ಗ್ರಾಮಗಳಲ್ಲಿ ಗ್ರಾಮ ಪರಿಮಿತಿರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕಳೆದ 2008 ಹಾಗೂ 2013 ರ ಚುನಾವಣೆಯಲ್ಲಿ ನಾನು ಸೋಲನ್ನನುಭವಿಸಲು ಮುದ್ದನಹಳ್ಳಿ ಗ್ರಾಮಸ್ಥರೇ ನೇರ ಕಾರಣ. ಒಂದು ವೇಳೆ ಈ ಗ್ರಾಮದ ಜನತೆ ನನ್ನನ್ನು ಬೆಂಬಲಿಸಿದ್ದರೆ 2008 ರಲ್ಲಿಯೇ ನಾನು ಶಾಸಕನಾಗಿ ಆಯ್ಕೆಯಾಗಿರುತ್ತಿದ್ದೆ, ನಾನು 2008, 2013, 2018 ರಲ್ಲಿಯೂ ಈ ಗ್ರಾಮದ ಜನ ನನ್ನನ್ನು ಬೆಂಬಲಿಸಲಿಲ್ಲ, ನೀವು ನನಗೆ ಹಿಂದೆಯೇ ಮತ ನೀಡಿದ್ದರೆ ನಿಮ್ಮ ಗ್ರಾಮ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿತ್ತು ಎಂದರು.
75 ವರ್ಷಗಳಿಂದ ನಿಮ್ಮ ಮತ ಪಡೆದವರು ನಿಮ್ಮ ಗ್ರಾಮಗಳ ಅಭಿವೃದ್ದಿ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದ ಕಾರಣ ನಿಮ್ಮ ಗ್ರಾಮಗಳು ಮೂಲಭೂತ ಸೌಲಭ್ಯ ಪಡೆಯುವಲ್ಲಿ ಹಿಂದೆ ಬಿದ್ದಿವೆ, ನನಗೆ ನೀವು ಮತ ನೀಡದಿದ್ದರೂ ನಾನು ನಿಮ್ಮ ಗ್ರಾಮದ ಅಭಿವೃದ್ದಿಗೆ ಸ್ಪಂಧಿಸುತ್ತಿದ್ದೇನೆ ಹಾಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ನನ್ನನ್ನು ಗೆಲ್ಲಿಸಿಕೊಟ್ಟರೆ ಮುದ್ದನಹಳ್ಳಿ ಗ್ರಾಮವನ್ನು ತಾಲೂಕಿನಲ್ಲಿಯೇ ಮಾದರಿ ಗ್ರಾಮವನ್ನಾಗಿ ಮಾಡಿ ಎಲ್ಲರೂ ತಿರುಗಿ ನೋಡುವಂತೆ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಪಂಚಾಯಿತ್ ರಾಜ್ ಇಂಜಿನಿಯರ ಮಲ್ಲಿಕಾರ್ಜುನ್, ಎಇಇ ಮಹಮದ್ ಪಾಷ, ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಸಾದ್, ಕೆಇಬಿ ಎಇಇ ಸುನೀಲ್, ಮುಖಂಡರಾದ ಅಣ್ಣಯ್ಯಶೆಟ್ಟಿ, ಕಾಳೇಗೌಡ, ಈರಯ್ಯ, ಸತೀಶ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.