ಬೆಂಗಳೂರು: ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡಿ ಖಾಸಗಿಕರಣ ಮಾಡುವುದನ್ನು ವಿರೋಧಿಸಿ ಮತ್ತು ನ್ಯಾಯ ಸಮ್ಮತ ಕಬ್ಬುದರ ನಿಗದಿಗೆ ಒತ್ತಾಯಿಸಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸೆ.25ರಂದು ರಾಷ್ಟ್ರೀಯ ರೈತ ಮುಖಂಡರ ರಾಷ್ಟ್ರೀಯ ಅಧಿವೇಶನ ಮತ್ತು ಸೆ. 26 ರಂದು ರೈತರ ಬೃಹತ್ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಭಾರತ ರಾಜ್ಯಗಳ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಕೃಷಿ ಕಾಯ್ದೆಗಳನ್ನು ರದ್ದುಮಾಡಿ ಎಂಎಸ್ ಪಿ ಗ್ಯಾರೆಂಟಿ ಕಾನೂನು ಜಾರಿ ಮಾಡುತ್ತೇವೆ, ಹೋರಾಟದಲ್ಲಿ ಮಡಿದ 750 ರೈತ ಕುಟುಂಬಗಳಿಗೆ ಪರಿಹಾರ ನೀಡುತ್ತೇವೆ ಎಂದು 2021ರ ನವಂಬರ್ನಲ್ಲಿ ಭರವಸೆ ನೀಡಿದ ಪ್ರಧಾನಿ ಮೋದಿ ಭರವಸೆ ಹುಸಿಗೊಳಿಸಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಕನಿಷ್ಠ ಬೆಂಬಲ ಬೆಲೆ ಕಾತರಿ ನೀಡಲು ಸಮಿತಿ ರಚಿಸಿದ್ದೇವೆ ಎಂದು, ವರ್ಷ ಕಾಲ ಹೋರಾಟ ಮಾಡಿದ, ರೈತ ಮುಖಂಡರ ಹೊರಗಿಟ್ಟು ಸಮಿತಿ ರಚಿಸಿ ನಾಟಕವಾಡುತ್ತಿದ್ದಾರೆ, ಸಮಿತಿ ರಚನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ ತಿರಸ್ಕರಿಸಿದೆ. ಆದಕಾರಣ ದೇಶಾದ್ಯಂತ ರೈತ ಚಳವಳಿಯನ್ನು ಮತ್ತಷ್ಟು ಪ್ರಬಲಗೊಳಿಸಲು ದಕ್ಷಿಣ ಭಾರತದ ರಾಜ್ಯಗಳ ಕೇಂದ್ರ ಬಿಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮುಖಂಡರ ಕಿಸಾನ್ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಎಲ್ಲ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ MSP ಕಾತರಿ ಕಾನೂನು ಜಾರಿಗೆ ತರಬೇಕು, ಡಾ.ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. 2022ರ ವಿದ್ಯುತ್ ಕಾಯ್ದೆ ತಿದ್ದುಪಡಿ ಖಾಸಗಿಕರಣ ಕೈಬಿಡಬೇಕು. ಕಬ್ಬಿನ ಎಫ್ ಆರ್ ಪಿ ದರ ಪುನರ್ ಪರಿಶೀಲನೆ ನಡೆಸಿ ವೈಜ್ಞಾನಿಕವಾಗಿ ನ್ಯಾಯಯುತ ಕಬ್ಬಿನ ದರ ನಿಗದಿ ಮಾಡಬೇಕು. ಕೃಷಿ ಉತ್ಪನ್ನಗಳ ಹಾಗೂ ಉಪಕರಣಗಳ ಮೇಲಿನ ಜಿ ಎಸ್ಟಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಮೂರೂವರೆ ಲಕ್ಷ ರೈತರು ಕೃಷಿ ಸಂಕಷ್ಟದಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಕೊರೊನಾ ಲಾಕ್ಡೌನ್ ಸಂಕಷ್ಟದಿಂದ ನಲುಗಿದ್ದಾರೆ. ಆದಕಾರಣ ದೇಶದ ಉದ್ಯಮಿಗಳ 10 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ ರೀತಿಯಲ್ಲಿ, ರೈತರ ಸಾಲ ಮನ್ನಾ ಮಾಡಬೇಕು. ಫಸಲ್ ಬಿಮಾ ಬೆಳೆವಿಮೆ ಯೋಜನೆ ಮಾನದಂಡ ಬದಲಾಯಿಸಬೇಕು. ವಿಶ್ವವ್ಯಾಪಾರ ಒಪ್ಪಂದ ಡಬ್ಲ್ಯುಟಿಒ ನಿಂದ ಭಾರತ ಸರ್ಕಾರ ಹೊರಬರಬೇಕು ಎಂದು ಆಗ್ರಹಿಸಿದರು.
ಲಕ್ಷ್ಮಿಪುರ ಕೇರಿ ಪ್ರಕರಣದಲ್ಲಿ ಭಾಗಿಯಾಗಿರುವ ಕೇಂದ್ರದ ರಾಜ್ಯ ಗೃಹ ಸಚಿವ ಅಜಯ್ ಕುಮಾರ್ ಮಿಶ್ರಾ ಸಂಪುಟದಿಂದ ಕೈಬಿಡಬೇಕು. ದೆಹಲಿ ಹೋರಾಟದಲ್ಲಿ ಮಾಡಿದ 750 ರೈತ ಕುಟುಂಬಗಳಿಗೂ ಕೇಂದ್ರ ಸರ್ಕಾರ ನವಂಬರ್ ತಿಂಗಳಲ್ಲಿ ಮೂರು ಕೃಷಿ ಕಾಯ್ದೆ ರದ್ದು ಮಾಡಿದಾಗ ನೀಡಿದ ಭರವಸೆಯಂತೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಭರವಸೆ ಈಡೇರಿಸಬೇಕು.
ರಾಜ್ಯದಲ್ಲಿ ಅಂದಾಜು10 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಮಳೆ ಹಾನಿಯಿಂದ ರೈತರ ಬೆಳೆ ನಷ್ಟ ಆಗಿದೆ ಅಧಿಕಾರಿಗಳು ಕಾಟಚಾರದ ಸಮೀಕ್ಷೆ ನಡೆಸುತ್ತಿದ್ದಾರೆ ನೈಜ ನಷ್ಟ ಪರಿಹಾರ ನೀಡಲು ಮುಂದಾಗಬೇಕು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿ ತಾಲೂಕಿಗೂ ಭೇಟಿ ನೀಡಿ ಪರಿಶೀಲಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಬೇಕು.
ದೆಹಲಿ ಹೋರಾಟದಲ್ಲಿ ರೈತರ ಮೇಲೆ ದಾಖಲಾಗಿರುವ ಪೋಲಿಸ್ ಮುಖದಮೆಗಳನ್ನು ವಾಪಸ್ ಪಡೆಯಬೇಕು. ರಾಜ್ಯದಲ್ಲಿ ಜಾರಿ ಮಾಡಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂಬ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿ ದೇಶಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಹರೀಶ್ ಅದ್ದೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಬರಡನಪುರ ನಾಗರಾಜ್, ಗೋವಿಂದರಾಜ್ ಮುಂತಾದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಇದ್ದರು.