ಬೆಂಗಳೂರು: ದಸರಾ ಉಡುಗೊರೆ ಎಂಬಂತೆ ಇದೇ ಪ್ರಪ್ರಥಮ ಬಾರಿಗೆ ಸಾರಿಗೆ ನಿಗಮಗಳಲ್ಲಿ ಒಂದಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ಎಲ್ಲ ಅಧಿಕಾರಿಗಳು ಮತ್ತು ನೌಕರರಿಗೆ ಒಂದನೇ ತಾರೀಖಿಗೆ ವೇತನ ಪಾವತಿಸಲಾಗಿದೆ.
ಈ ಹಿಂದೆಯೇ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ಪ್ರತಿ ತಿಂಗಳು ಒಂದನೇ ತಾರೀಖಿಗೆ ಎಲ್ಲರಿಗೂ ವೇತನ ಪಾವತಿ ಮಾಡಬೇಕು ಎಂಬ ಆದೇಶ ಹೊರಡಿಸಿದ್ದರು. ಅದರಂತೆ KSRTCಯಲ್ಲಿ ನಿನ್ನೆ (ಅ.1) ಎಲ್ಲ ನೌಕರರಿಗೂ ವೇತನ ಪಾವತಿಯಾಗಿದೆ.
ಸಾರಿಗೆ ನಿಗಮಗಳಲ್ಲಿ ಸಿ ಗ್ರೂಪ್ ನೌಕರರಾಗಿರುವ ಚಾಲನಾ, ಮೆಕಾನಿಕ್ ಮತ್ತು ಭದ್ರತಾ ಸಿಬ್ಬಂದಿಯನ್ನು ಅಧಿಕಾರಿಗಳು ಬಹಳ ಕೀಳಾಗಿ ಕಾಣುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿತ್ತು. ಆದರೆ, ಅನ್ಬುಕುಮಾರ್ ಅವರು ನಿಗಮಕ್ಕೆ ಬಂದ ಮೇಲೆ ನೌಕರರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಾವೆ ಸ್ವತಃ ಕೇಳಿ ಪರಿಹಾರವನ್ನು ನೀಡುತ್ತಿರುವುದರಿಂದ ಈಗ ಆ ಆರೋಪ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
ಅಲ್ಲದೆ ನೌಕರರ ಬಗ್ಗೆ ಬಹಳ ಕಾಳಜಿ ಹೊಂದಿದ್ದು, ಅಧಿಕಾರಿಗಳು ನೌಕರರು ಮಾಡದ ತಪ್ಪಿಗೆ ಅಮಾನತು ದಂಢದಂತಹ ಶಿಕ್ಷೆ ನೀಡಿದರೆ ಅಥವಾ ರಜೆ ಬದಲಿಗೆ ಗೈರು ಹಾಜರಿ ತೋರಿಸಿದರೆ ಆ ಬಗ್ಗೆ ಖುದ್ದು ತಾವೆ ಪರಿಶೀಲನೆ ಮಾಡಿ ಅಧಿಕಾರಿಗಳ ಬೆವರಿಳಿಸುವ ಕೆಲಸ ಮಾಡುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯವಾದದ್ದು.
ಮೂರು ನಿಗಮಗಳಲ್ಲಿ 1ನೇ ತಾರೀಖಿಗೆ ವೇತನ ಆಗೊಲ್ಲ: ಇನ್ನು ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಬಿಎಂಟಿಸಿಯಲ್ಲಿ ಈ ವೇತನ ಪದ್ಧತಿಯನ್ನು ಇನ್ನೂ ಅಳವಡಿಸಿಕೊಂಡಿಲ್ಲ. ಈ ಮೂರು ನಿಗಮಗಳಲ್ಲಿ ಈ ರೀತಿ ವೇತನ ಪಾವತಿ ಜಾರಿಯಾದರೆ, ರಾಜ್ಯದ ಸಾರಿಗೆ ನಿಗಮಗಳ ನೌಕರರೆಲ್ಲರೂ ಪ್ರತಿ ತಿಂಗಳು ಒಂದನೇ ತಾರೀಖಿನಂದು ವೇತನ ಪಡೆಯಲಿದ್ದಾರೆ ಎಂದು ಸಾರಿಗೆ ನೌಕರರ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಬಿಎಂಟಿಸಿಯಲ್ಲಿ 10ನೇ ತಾರೀಖೀನ ಒಳಗೆ ವೇತನ ಪಾವತಿಯಾಗುತ್ತಿದೆ. ಆದರೆ ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿಯಲ್ಲಿ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡುವಲ್ಲಿ ಇನ್ನು ಆ ನಿಗಮಗಳು ವಿಫಲವಾಗುತ್ತಿವೆ. ಹೀಗಾಗಿ ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿಯಲ್ಲಿ ಕನಿಷ್ಠಪಕ್ಷ ಪ್ರತಿ ತಿಂಗಳ 10ನೇ ತಾರೀಖಿನ ಒಳಗೆ ವೇತನ ಪಾವತಿ ಮಾಡಿದರೆ ಸಾಕು ಎನ್ನುತ್ತಿದ್ದಾರೆ ನೌಕರರು.
ಇನ್ನು ಸಾರಿಗೆ ನೌಕರರ ಸಂಘಟನೆಗಳ ಮುಖಂಡರು KSRTCಯಲ್ಲಿ ಅನುಸರಿಸಿರುವ ವೇತನ ಪಾವತಿ ಪದ್ಧತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಈ ಮೂಲಕ ರಾಜ್ಯದಲ್ಲಿ ಸಾರಿಗೆ ನಿಗಮಗಳು ಒಂದನೇ ತಾರೀಖಿಗೆ ಎಲ್ಲರಿಗೂ ವೇತನ ನೀಡುತ್ತಿವೆ ಎಂಬ ಭಾವನೆ ಮೂಡಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕರಿಗೆ ಅಭಿನಂದನೆ: ಪ್ರತಿ ತಿಂಗಳು KSRTC ನೌಕರರ ಬ್ಯಾಂಕ್ ಖಾತೆಗಳಿಗೆ ವೇತನ ಪಾವತಿಯಾವುದು ಖಚಿತವಾಗಿದೆ ಎಂದು KSRTC ನೌಕರರು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಅಭಿನಂದನೆ ತಿಳಿಸಿದ್ದಾರೆ.