ಮೈಸೂರು: ಭಾರತ್ ಜೋಡೋ ಪಾದಯಾತ್ರೆಯ ರಾಜ್ಯದ ನಡಿಗೆಯಲ್ಲಿ ಭಾಗವಹಿಸಲು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿಶೇಷ ವಿಮಾನದ ಮೂಲಕ ಸೋಮವಾರ ಆಗಮಿಸಿದರು.
ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಕ್ಷದ ಮೈಸೂರು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಘಟಕದ ಅಧ್ಯ ಕ್ಷ ಆರ್.ಮೂರ್ತಿ ಮತ್ತಿತರಮುಖಂಡರು ಬರಮಾಡಿಕೊಂಡರು.
ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್, “ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋಯಾತ್ರೆ ಯಶಸ್ವಿಯಾಗಿ ನಡೆಯುತ್ತಿದ್ದು, ಇದೇ 6ರಂದು ಸೋನಿಯಾಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಸೋಮವಾರ ಮೈಸೂರಿಗೆ ಆಗಮಿಸಿರುವ ಅವರ ಕೊಡಗು ಭೇಟಿ ರದ್ದಾಗಿದೆ. ಹವಾಮಾನ ಸರಿಯಿಲ್ಲದ ಹಿನ್ನೆಲೆ ಹೆಲಿಕಾಪ್ಟರ್‌ನಲ್ಲಿ ತೆರಳಲು ಸಾಧ್ಯವಾಗಿಲ್ಲ. ಊಟದ ನಂತರ ರಸ್ತೆ ಮಾರ್ಗದಲ್ಲಿಯೇ ಕೊಡಗಿಗೆ ಹೋಗುತ್ತಾರೆ ಎನ್ನಲಾಗಿತ್ತು. ಆದರೆ ಕಡೆ ಕ್ಷಣದಲ್ಲಿ ಅನಾರೋಗ್ಯದ ಕಾರಣ ರಸ್ತೆ ಮಾರ್ಗದಲ್ಲಿ ಹೆಚ್ಚು ದೂರ ಸಂಚರಿಸಲು ಸಾಧ್ಯವಿಲ್ಲ ಎಂದು ಪ್ರವಾಸವನ್ನು ರದ್ದು ಮಾಡಲಾಗಿದೆ.
ಕೊಡಗಿನ ರೆಸಾರ್ಟ್ ಬದಲಾಗಿ ಎರಡು ದಿನಗಳ ಕಾಲ ಮೈಸೂರಿನ ಕಬಿನಿ ರೆಸಾರ್ಟಿನಲ್ಲಿ ಸೋನಿಯಾ ಗಾಂಧಿ ತಂಗಲಿದ್ದಾರೆ. ಇಂದು 12.30ಕ್ಕೆ ಸೋನಿಯಾ ಗಾಂಧಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಕಾರ್ಯಕ್ರಮದ ಪ್ರಕಾರ ಮಧ್ಯಾಹ್ನ ಒಂದು ಗಂಟೆಗೆ ಅವರು ಹೆಲಿಕಾಪ್ಟರ್ ಮೂಲಕ ಮೈಸೂರಿನಿಂದ ಕೊಡಗು ಗಾಲ್ಫ್ ಕ್ಲಬ್‌ನ ಹೆಲಿಪ್ಯಾಡ್‌ಗೆ ಹೋಗಬೇಕಿತ್ತು. ಆದರೆ ಹವಾಮಾನ ಪರಿಸ್ಥಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಹೆಲಿಕಾಪ್ಟರ್ ಮೂಲಕ ಹೋಗಲು ಸಾಧ್ಯವಾಗಲಿಲ್ಲ.
ಹೆಲಿಕಾಪ್ಟರ್ ಯಾನ ಅಸಾಧ್ಯ ಎಂದು ತಿಳಿದ ಬಳಿಕ ಒಂದೇ ಕಾರಿನಲ್ಲಿ ಮೈಸೂರಿನ ವಿಂಡ್ ಫ್ಲವರ್ ಹೋಟೆಲ್‌ಗೆ ಮಧ್ಯಾಹ್ನ ಉಪಾಹಾರಕ್ಕೆ ತೆರಳಿದರು. ಅಲ್ಲಿಂದ ನೇರವಾಗಿ ರಸ್ತೆ ಮಾರ್ಗದಲ್ಲೇ ಕೊಡಗಿಗೆ ಹೋಗುತ್ತಾರೆ ಎಂದು ಭಾವಿಸಲಾಗಿತ್ತು.
ಆದರೆ ಸೋನಿಯಾ ಗಾಂಧಿ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆಯಿದ್ದು ಇತ್ತೀಚೆಗಷ್ಟೇ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಹಿನ್ನೆಲೆ ಹೆಚ್ಚು ದೂರದ ರಸ್ತೆ ಪ್ರಯಾಣ ಬೇಡವೆಂದು ನಿರ್ಧರಿಸಿ ಮೈಸೂರಿನಲ್ಲೇ ಉಳಿಯುವ ನಿರ್ಧಾರ ಮಾಡಿದರು. ರಾಹುಲ್ ಗಾಂಧಿ ಕೂಡ ಮೈಸೂರಿನಲ್ಲೇ ಇದ್ದು, ಕೆಲ ಹೊತ್ತಿನ ಹಿಂದಷ್ಟೇ ಚಾಮುಂಡಿ ದೇವಿಯ ದರ್ಶನ ಪಡೆದಿದ್ದಾರೆ.
ಇನ್ನು ದಸರಾ ಹಬ್ಬದ ಪ್ರಯುಕ್ತ ಅ.4 ಮತ್ತು 5ರಂದು ಭಾರತ್ ಜೋಡೋಯಾತ್ರೆಗೆ ಬಿಡುವು ನೀಡಲಾಗಿದ್ದು, ಅ.6ರಂದುಯಾತ್ರೆ ಪುನರಾಂಭವಾಗಲಿದೆ. ಆ ವೇಳೆ ಸೋನಿಯಾಮತ್ತು ಪ್ರಿಯಾಂಕಾ ಗಾಂಧಿ ಅವರು ರಾಹುಲ್ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.