CrimeNEWSನಮ್ಮರಾಜ್ಯ

ಖಾಸಗಿ ದೂರು (PCR) ವಿಚಾರಣೆಗೆ ಏಳು ಮಾರ್ಗಸೂಚಿ ರೂಪಿಸಿದ ಹೈಕೋರ್ಟ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಖಾಸಗಿ ದೂರುಗಳನ್ನು (ಪಿಸಿಆರ್) ವಿಚಾರಣೆಗೆ ಅಂಗೀಕರಿಸುವಾಗ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಸರಿಸಬೇಕಾದ ಕ್ರಮಗಳ ಕುರಿತು ಹೈಕೋರ್ಟ್ ಮಾರ್ಗಸೂಚಿ ರೂಪಿಸಿದೆ.

ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಪಿಸಿಆರ್ ಗಳ ವಿಚಾರಣೆಗೆ ಒಟ್ಟು 7 ಮಾರ್ಗಸೂಚಿಗಳನ್ನು ರೂಪಿಸಿದೆ.

ಪಿಸಿಆರ್ ಅಂಗೀಕರಿಸುವ ಮುನ್ನ ಅನುಸರಿಸಬೇಕಾದ ಮಾರ್ಗಸೂಚಿ: ಖಾಸಗಿ ದೂರು ಸಲ್ಲಿಕೆಯಾದಾಗ ಅದನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಕಡ್ಡಾಯವಾಗಿ ಓದಬೇಕು. ದೂರಿನಲ್ಲಿ ಅಪರಾಧ ಕೃತ್ಯ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದರೆ ದೂರನ್ನು ವಜಾಗೊಳಿಸಬಹುದು. ಆದರೆ, ದೂರುದಾರ ಸೂಕ್ತ ರೀತಿಯಲ್ಲಿ ದೂರು ಸಿದ್ಧಪಡಿಸಿಲ್ಲ ಎಂಬ ಅಂಶ ಕಂಡುಬಂದರೆ, ಕೇವಲ ದೂರನ್ನು ಓದಿದ ಮಾತ್ರಕ್ಕೆ ವಜಾಗೊಳಿಸಬಾರದು.

ಹಾಗೆ ಏಕಾಏಕಿಯಾಗಿ ವಜಾಗೊಳಿಸುವುದರಿಂದ ದೂರುದಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇನ್ನು, ಅಪರಾಧ ಘಟಿಸದಿದ್ದರೂ ಕೃತ್ಯ ನಡೆದಿದೆ ಎಂಬಂತೆ ಚಾಣಾಕ್ಷತನದಿಂದ ದೂರು ಸಿದ್ಧಪಡಿಸಿದ್ದ ಸಂದರ್ಭದಲ್ಲಿ ದೂರುದಾರ ಮತ್ತು ಸಾಕ್ಷಿಗಳನ್ನು ಪರಿಶೀಲಿಸಬಹುದು.

ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 200 ರ ಪ್ರಕಾರ ದೂರನ್ನು ಓದಿದ ನಂತರ (ಸಾಕ್ಷಿಗಳು ಹಾಜರಿದ್ದರೆ ಮತ್ತು ಅವರನ್ನು ವಿಚಾರಿಸುವುದು ಅಗತ್ಯವಾದರೆ) ಪ್ರಕರಣದಲ್ಲಿ ಮುಂದುವರಿಯಲು ಸೂಕ್ತ ಅಂಶಗಳಿವೆ ಎಂಬ ತೀರ್ಮಾನಕ್ಕೆ ಬಂದರೆ, ಮ್ಯಾಜಿಸ್ಟ್ರೇಟ್ ಕೋರ್ಟ್ ಕಾಗ್ನಿಜೆನ್ಸ್ ತೆಗೆದುಕೊಂಡು ಆರೋಪಿಗೆ ನೋಟಿಸ್ ಜಾರಿಗೊಳಿಸಬಹುದು.

ಸಿಆರ್‌ಪಿಸಿ ಸೆಕ್ಷನ್ 200 ರ ಪ್ರಕಾರ ಎಲ್ಲ ಪ್ರಕ್ರಿಯೆ ಅನುಸರಿಸಿದ ಬಳಿಕವೂ ಪ್ರಕರಣದಲ್ಲಿ ಕಾಗ್ನಿಜೆನ್ಸ್ ತೆಗೆದುಕೊಳ್ಳಲು ಸಮರ್ಪಕ ಅಂಶಗಳು ಇಲ್ಲ ಎಂದು ಕಂಡು ಬಂದರೆ ಆ ಬಗ್ಗೆ ಮ್ಯಾಜಿಸ್ಟ್ರೇರ್ಟ್ ಖುದ್ದು ವಿಚಾರಣೆ ನಡೆಸಬಹುದು ಅಥವಾ ಸಿಆರ್‌ಪಿಸಿ ಸೆಕ್ಷನ್ 202ರಡಿ ನೇರ ತನಿಖೆಗೆ ನಿರ್ದೇಶಿಸಬಹುದು.

ಒಂದು ವೇಳೆ ದೂರುದಾರರು ಹಾಗೂ ಸಾಕ್ಷಿಗಳನ್ನು ಪರೀಕ್ಷೆಗೊಳಪಡಿಸಿದ ನಂತರವೂ ಅಪರಾಧ ಕೃತ್ಯವನ್ನು ಸಾಬೀತು ಪಡಿಸುವಂತಹ ಅಂಶಗಳು ಲಭ್ಯವಾಗದಿದ್ದರೆ ಸಿಆರ್‌ಪಿಸಿ ಸೆಕ್ಷನ್ 203 ರ ಅನುಸಾರ ದೂರನ್ನು ರದ್ದುಪಡಿಸಬಹುದು.

ಸೆಕ್ಷನ್ 202ರ ಪ್ರಕಾರ ಕ್ರಮ ಕೈಗೊಳ್ಳುವುದು ಎಲ್ಲ ಸಂದರ್ಭಗಳಲ್ಲೂ ಕಡ್ಡಾಯವಲ್ಲ. ಸೆಕ್ಷನ್ 202 ರಲ್ಲಿ ವಿವರಿಸಿರುವ ಸಂದರ್ಭಕ್ಕೆ ಅನುಗುಣವಾಗಿದ್ದರೆ ಮಾತ್ರ ದೂರನ್ನು ವಿಚಾರಣೆಗೆ ಆದೇಶಿಸಬಹುದು. ಅಂದರೆ ಸೆಕ್ಷನ್ 200 ರ ಹಂತದ ನಂತರವೂ ದೂರನ್ನು ಕಾಗ್ನಿಜೆನ್ಸ್ ತೆಗೆದುಕೊಳ್ಳುವುದು ಅಥವಾ ವಜಾಗೊಳಿಸುವುದು ಆಯಾ ಸಂದರ್ಭವನ್ನು ಆಧರಿಸುತ್ತದೆ.

ಕಾಗ್ನಿಜೆನ್ಸ್ ತೆಗೆದುಕೊಂಡ ಬಗ್ಗೆ ಆದೇಶದ ಪ್ರತಿಯಲ್ಲಿ ಕಡ್ಡಾಯವಾಗಿ ಹಿಂಬರಹ ನೀಡುವುದು ಅಗತ್ಯವಿಲ್ಲ. ಆದರೆ, ಕಾಗ್ನಿಜೆನ್ಸ್ ತೆಗೆದುಕೊಳ್ಳುದಕ್ಕೆ ವಿವೇಚನೆ ಬಳಸಬೇಕು. ಕಾಗ್ನಿಜೆನ್ಸ್ ತೆಗೆದುಕೊಂಡಿರುವ ಬಗ್ಗೆ ಆದೇಶದಲ್ಲಿ ಸಂಕ್ಷಿಪ್ತವಾಗಿ ವಿವರಿಸಬೇಕು. ಆರೋಪಿಗೆ ನೋಟಿಸ್ ಜಾರಿಗೆ ಕೈಗೊಂಡ ನಿರ್ಧಾರವೇ ಕಾಗ್ನಿಜೆನ್ಸ್ ತೆಗೆದುಕೊಳ್ಳಲಾಗಿದೆ ಎಂಬುದನ್ನು ಸೂಚಿಸುತ್ತದೆ.

ತನಿಖಾಧಿಕಾರಿ ಬಿ ರಿಪೋರ್ಟ್ ಸಲ್ಲಿಸಿದ ಸಂದರ್ಭದಲ್ಲಿ ಅದನ್ನು ದೂರುದಾರ ಪ್ರಶ್ನಿಸಿದರೆ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಮೇಲೆ ಹೇಳಿದ ಕ್ರಮಗಳನ್ನು ಅನುಸರಿಸಬೇಕು.

ಮಾರ್ಗಸೂಚಿ ರೂಪಿಸಲು ಕಾರಣವಾದ ಪ್ರಕರಣ: ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಭೂ ಮಾಲೀಕರು ಎನ್ನಲಾದ ಚಿಕ್ಕಬಳ್ಳಾಪುರದ ಬಿ.ಎನ್. ನರಸಿಂಹಮೂರ್ತಿ ಎಂಬುವರು ಶ್ರೀಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಈ ಪಿಸಿಆರ್ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ದೂರಿನ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿತ್ತು.

ಪ್ರಕರಣದಲ್ಲಿ ಅಪರಾಧ ಕೃತ್ಯ ನಡೆದಿರುವುದನ್ನು ಸಾಬೀತುಪಡಿಸಲು ಯಾವುದೇ ದಾಖಲೆ ಮತ್ತು ಸಾಕ್ಷ್ಯ ಲಭ್ಯವಿಲ್ಲದಿದ್ದರೂ ತನಿಖೆಗೆ ಆದೇಶಿಸಿರುವ ಮ್ಯಾಜಿಸ್ಟ್ರೇಟ್ ಕ್ರಮ ಸರಿಯಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.

ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿ ತನಿಖೆಗೆ ಆದೇಶಿಸುವ ಮುನ್ನ ಮ್ಯಾಜಿಸ್ಟ್ರೇಟ್ ಕೋರ್ಟ್ ಕಡ್ಡಾಯವಾಗಿ ಅನುಸರಿಸಬೇಕಾದ ಈ ಏಳು ಮಾರ್ಗಸೂಚಿಗಳನ್ನು ರಚಿಸಿದೆ. ಇದೇ ವೇಳೆ ಟ್ರಸ್ಟ್ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಮತ್ತು ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿದೆ.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ