ಬೆಂಗಳೂರು: ಕೋರ್ಟ್‌ನಲ್ಲಿ ಅನುಕೂಲಕರ ಆದೇಶ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಕಕ್ಷೀದಾರರೊಬ್ಬರು ಬೆಂಗಳೂರಿನ ವಕೀಲರೊಬ್ಬರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಮಂಗಳೂರಿನ 2ನೇ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ತಮ್ಮ ವಿರುದ್ಧ ದಾಖಲಿಸಿದ್ದ ಖಾಸಗಿ ದೂರನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ವಕೀಲ ಕೆ.ಎಸ್. ಮಹದೇವನ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಬೆಂಗಳೂರಿನ ವಕೀಲ ಕೆ.ಎಸ್. ಮಹದೇವನ್ ವಿರುದ್ಧ ಮಂಗಳೂರಿನ ನ್ಯಾಯಾಲಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ನಾಗರಿಕರಾದ 75 ವರ್ಷದ ಸಿಪ್ರಿಯನ್ ಮೆನೆಜಸ್ ಎಂಬುವರು ನಂಬಿಕೆ ದ್ರೋಹ ಹಾಗೂ ವಂಚನೆ ಆರೋಪದಡಿ ಖಾಸಗಿ ದೂರು (ಪಿಸಿಆರ್) ದಾಖಲಿಸಿದ್ದರು.
ದೂರಿನಲ್ಲಿ, ಪ್ರಕರಣವೊಂದಕ್ಕೆ ಸಂಬಂಧಿದಂತೆ ತಾವು ವಕೀಲ ಮಹದೇವನ್ ಅವರನ್ನು ಸಂಪರ್ಕಿಸಿದ್ದೆವು. ಆ ವೇಳೆ ವಕೀಲ ಮಹದೇವನ್ ತಮಗೆ ಸುಪ್ರೀಂಕೋರ್ಟ್ ನಲ್ಲಿ ಸಾಕಷ್ಟು ಹಿರಿಯ ವಕೀಲರ ಪರಿಚಯವಿದೆ. ಪ್ರಕರಣದಲ್ಲಿ ಅನುಕೂಲಕರ ತೀರ್ಪು ಕೊಡಿಸುತ್ತೇವೆ ಎಂದಿದ್ದರು.
ಅದನ್ನು ನಂಬಿ ಲಕ್ಷಾಂತರ ರೂಪಾಯಿ ನೀಡಿದ್ದೆ. ಆದರೆ, ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದ ದಿನ ಸರಿಯಾದ ಮಾಹಿತಿಯನ್ನೇ ನೀಡಲಿಲ್ಲ. ಈ ಮೂಲಕ ತಮಗೆ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಿ ಪಿಸಿಆರ್ ದಾಖಲಿಸಿದ್ದರು.
ಈ ಪಿಸಿಆರ್ ರದ್ದುಪಡಿಸುವಂತೆ ಕೋರಿ ವಕೀಲ ಮಹದೇವನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ಸಂಬಂಧ ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್, ಯಾವುದೇ ಪ್ರಕರಣದಲ್ಲಿ ವಕೀಲರು ಖಂಡಿತವಾಗಿಯೂ ಕಕ್ಷೀದಾರರಿಗೆ ಪೂರಕವಾದ ಆದೇಶವನ್ನೇ ಪಡೆಯುತ್ತಾರೆ ಎಂಬುದು ನಂಬಲಾಗದ ವಿಚಾರ ಎಂದು ತಿಳಿಸಿತು.
ನಂತರ ಪ್ರಕರಣದ ವಾಸ್ತವಾಂಶ ಹಾಗೂ ಕಾನೂನು ಇಲ್ಲಿ ಪ್ರಮುಖ ಅಂಶವಾಗಿರುತ್ತವೆ. ವಕೀಲರಿಗೆ ಪಾವತಿಸುವ ಶುಲ್ಕಕ್ಕೂ ಮತ್ತು ನ್ಯಾಯಾಲಯದ ಆದೇಶಕ್ಕೂ ಸಂಬಂಧವಿರುವುದಿಲ್ಲ. ಫೀಸು ಎಂಬುದು ವಕೀಲರು ಮತ್ತು ಕಕ್ಷೀದಾರರ ನಡುವಿನ ಖಾಸಗಿ ವಿಚಾರ.
ಇನ್ನು ವಕೀಲರು ನ್ಯಾಯಾಲಯದಲ್ಲಿ ಕಕ್ಷೀದಾರರಿಗೆ ಪೂರಕವಾದ ತೀರ್ಪು ಅಥವಾ ಆದೇಶ ಪಡೆಯಲಾಗಲಿಲ್ಲ ಎಂದಾಕ್ಷಣ ಅವರು ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಹೇಳಲು ಸಾಧ್ಯವಾಗದು. ವಕೀಲರು ಪ್ರಕರಣದಲ್ಲಿ ಯಶಸ್ವಿಯಾಗುವಂತೆ ಮಾಡಲು ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ಪಟ್ಟಿರುತ್ತಾರೆ. ಅಂತಿಮವಾಗಿ ಪ್ರಕರಣದ ಅರ್ಹತೆ ಮತ್ತು ಕಾನೂನು ಅನ್ವಯದಂತೆ ತೀರ್ಮಾನವಾಗುತ್ತದೆ ಎಂದು ವಿವಿಸಿತು.
ವಕೀಲರು ತಮ್ಮ ಕಡೆಯಿಂದ ಈ ಪ್ರಕರಣದಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಅನುಕೂಲಕರ ಆದೇಶ ಪಡೆಯುತ್ತೇವೆ ಎಂದು ತಿಳಿಸಿ ನಂಬಿಕೆ ದ್ರೋಹ ಮಾಡಿದ್ದಾರೆ ಹಾಗೂ ವಂಚಿಸಿದ್ದಾರೆ ಎಂದು ಹೇಳಲಾಗದು. ಹಾಗಿದ್ದೂ, ವಕೀಲ ಮಹದೇವನ್ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಮುಂದುವರಿಯಲು ಬಿಟ್ಟರೆ ಕಾನೂನು ದುರ್ಬಳಕೆಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ವಕೀಲ ಮಹದೇವನ್ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.