ಬೆಂಗಳೂರು/ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕೂ ನಿಗಮಗಳ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇದೇ ಅ.19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಿ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟದ ಉಪಾಧ್ಯಕ್ಷ ಹಣಮಂತಪ್ಪ ಇಟಗಿ ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರ ಹಿತ ದೃಷ್ಟಿಯಿಂದ 1-1-2020ರಂದು ಆಗಿಬೇಕಿದ್ದ ವೇತನ ಪರಿಷ್ಕರಣೆ ಆಗಿಲ್ಲ. ಅಂದರೆ ಕಳೆದ 33 ತಿಂಗಳುಗಳಿಂದ ಆಗಿಲ್ಲ. ಈ ಸಂಬಂಧ ಯಾವುದೇ ಮಾತುಕತೆ ನಡೆಸಲು ಸಹ ಸರ್ಕಾರ ಮತ್ತು ಆಡಳಿತ ಮಂಡಳಿ ಮುಂದಾಗುತ್ತಿಲ್ಲ.
ಹೀಗಾಗಿ ಇದೇ ಅ.19ರ ಒಳಗೆ ಸಂಘಟನಗೆಳನ್ನು ಕರೆದು ಸರ್ಕಾರಿ ನೌಕರರಿಗೆ ಸರಿ ಸಮಾನದ ವೇತನವನ್ನು ಸಾರಿಗೆ ನೌಕರರಿಗೆ ಕೊಡುವ ತೀರ್ಮಾನ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಅ.19ರಂದು ಬೃಹತ್ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ಸಾರಿಗೆ ನೌಕರರಿಗೆ ವೇತನ ಆಯೋಗದ ಮಾದರಿಯಂತೆ ವೇತನ ನೀಡಬೇಕು. ಇಲ್ಲದಿದ್ದರೆ ನಾವು ನಿಮ್ಮ ಮನೆ ಮುಂದೆ ಒಂದು ಸಾವಿರಕ್ಕೂ ಹೆಚ್ಚಿನ ಪದಾಧಿಕಾರಿಗಳು ಕಾರ್ಯಕರ್ತರು ಸೇರಿ ಧರಣಿ ನಡೆಸುವುದು ಖಚಿತ ಎಂದು ಹೇಳಿದ್ದಾರೆ.
ಧರಣಿ ಸಂಬಂಧ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದು, ಅನುಮತಿ ಕೋರಲಾಗಿದೆ ಎಂದು ಮಜ್ದೂರ್ ಸಂಘ ಒಕ್ಕೂಟದ ಬೆಂಗಳೂರು ಉಪಾಧ್ಯಕ್ಷ ಮಂಜುನಾಥ ಪ್ರಸನ್ನ ತಿಳಿಸಿದ್ದಾರೆ.
ಇನ್ನು ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಅವರ ನೇತೃತ್ವದಲ್ಲಿ ಈ ಧರಣಿ ಆಯೋಜಿಸಲಾಗಿದೆ. ಇದಕ್ಕೆ ನಾಲ್ಕೂ ನಿಗಮಗಳ ಸಮಸ್ತ ನೌಕರರು ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.