ಯಾದಗಿರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಸೈಕಲ್ ಜಾಥಾ ಇಂದಿಗೆ 9ನೇ ದಿನಕ್ಕೆ ಕಾಲಿಟ್ಟಿದ್ದು, 8ನೇದಿನವಾದ ಸೋಮವಾರ ಯಾದಗಿರಿ ಡಿಸಿಗೆ ಮನವಿ ಸಲ್ಲಿಸುವ ಮೂಲಕ ಬೀದರ್ ಕಡೆ ಹೊರಟ ಜಾಥಾ 30ಕಿಮೀ ಕ್ರಮಿಸಿ ಮಾರ್ಗ ಮಧ್ಯೆ ಗೌಡನಹಳ್ಳಿ ಗ್ರಾಮದ ಬೋಜಲಿಂಗೆಶ್ವರ ದೇವಸ್ಥಾನದಲ್ಲಿ ರಾತ್ರಿ ವಾಸ್ತವ್ಯ ಹೂಡಿತು.
ಇಂದು ಮುಂಜಾನೆ ಮತ್ತೆ ಜಾಥಾ ಮುಂದುರಿದಿದ್ದು, ಬೋಜಲಿಂಗೆಶ್ವರ ದೇವಸ್ಥಾನದಿಂದ ಬೀದರ್ ಕಡೆ ಸಾಗುತ್ತಿದೆ. ಇದೇ ಅಕ್ಟೋಬರ್ 21ರಂದು ಬೀದರ್ ತಲುಪಲಿದ್ದು, ಅಲ್ಲಿನ ನೌಕರರು ಅದ್ದೂರಿ ಸ್ವಾಗತ ಕೋರಲು ಸಜ್ಜಾಗಿದ್ದಾರೆ.
ಇನ್ನು ಸಾರಿಗೆಯ ಬೀದರ್ ವಿಭಾಗದ ಎಲ್ಲ ರಜೆ, ವಾರದ ರಜೆ ಇರುವ ಮತ್ತು ಕರ್ತವ್ಯ ಮುಗಿಸಿ ಮನೆಗೆ ಮರಳುವ ನೌಕರರು ಸಮವಸ್ತ್ರ ಧರಸಿ ಬರಬೇಕೆಂದು ಸಲಹೆ ನೀಡಿದ್ದಾರೆ.
ಅ.21ರಂದು ಬೆಳಗ್ಗೆ 10ಗಂಟೆಗೆ ಬೀದರ್ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಾಥಾದೊಂದಿಗೆ ಎಲ್ಲ ನೌಕರರು ಸಮಾವೇಶಗೊಂಡು ಡಿಸಿ ಅವರಿಗೆ ಮನವಿ ಸಲ್ಲಿಸಲಿದ್ದಾರೆ.
ಜಾಥಾವು ನಿರಂತರವಾಗಿ ಸಾಗುತ್ತಿದ್ದು, ಚಳಿ, ಮಳೆ, ಬಿಸಿಲು ಎನ್ನದೆ ಸಮಸ್ತ ಸಾರಿಗೆ ಅಧಿಕಾರಿಗಳು ಮತ್ತು ನೌಕರರಿಗೆ ಸಲ್ಲಬೇಕಿರುವ ನ್ಯಾಯಯುತ ವೇತನದ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮತ್ತು ನಿಗಮಗಳ ಆಡಳಿತ ಮಂಡಳಿಯನ್ನು ಎಚ್ಚರಿಸಲು ಕೂಟದ ಪದಾಧಿಕಾರಿಗಳು ಟೊಂಕಕಟ್ಟಿ ಸಾಗುತ್ತಿದ್ದಾರೆ.