ಲಂಡನ್: ಭಾರತ ಮೂಲದ ರಿಷಿ ಸುನಾಕ್ ಅವರನ್ನು ಬ್ರಿಟನ್ ಪ್ರಧಾನಿಯಾಗಿ 3ನೇ ಕಿಂಗ್ ಚಾರ್ಲ್ಸ್ ಅವರು ಮಂಗಳವಾರ ನೇಮಕ ಮಾಡಿದ್ದಾರೆ. ಇದೀಗ ಸುನಾಕ್ ಬ್ರಿಟನ್ ಪ್ರಧಾನಿಯಾದ ಮೊದಲ ಭಾರತೀಯ ವ್ಯಕ್ತಿ ಮಾತ್ರವಲ್ಲದೇ ಅತ್ಯಂತ ಕಿರಿಯ ಯುಕೆ ಪಿಎಂ ಎನಿಸಿಕೊಂಡಿದ್ದಾರೆ.
ಸುನಾಕ್ ಅವರನ್ನು ಬ್ರಿಟನ್ ಪ್ರಧಾನಿಯಾಗಿ ಆಯ್ಕೆ ಮಾಡಲು ಭಾರೀ ಬೆಂಬಲ ವ್ಯಕ್ತವಾದ ಹಿನ್ನೆಲೆ ಪೆನ್ನಿ ಮೊರ್ಡಂಟ್ ಪ್ರಧಾನಿ ಹುದ್ದೆಯ ರೇಸ್‌ನಿಂದ ಹಿಂದೆ ಸರಿದರು. ಬಳಿಕ ಸುನಾಕ್ ಸೋಮವಾರ ಅಧಿಕೃತವಾಗಿ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದರು.
ಬ್ರಿಟನ್ ಪ್ರಧಾನಿಯಾಗಿ ನೇಮಕಗೊಂಡ ಬಳಿಕ ದೇಶವನ್ನುದ್ದೇಶಿಸಿ ತಮ್ಮ ಮೊದಲ ಭಾಷಣವನ್ನು ಮಾಡಿದ ಸುನಾಕ್, ಇದೀಗ ನಮ್ಮ ದೇಶವು ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಯುದ್ಧ ಸಾರಿ, ವಿಶ್ವದಾದ್ಯಂತ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಿದ್ದಾರೆ.
ಲಿಜ್ ಟ್ರಸ್ ಅವರು ಈ ದೇಶದ ಆರ್ಥಿಕ ಗುರಿಗಳಿಗಾಗಿ ಕೆಲಸ ಮಾಡುವುದು ತಪ್ಪಲ್ಲ, ನಾನು ಅವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಕೆಲವು ತಪ್ಪುಗಳನ್ನು ಮಾಡಲಾಗಿದೆ. ಅದು ಕೆಟ್ಟ ಉದ್ದೇಶದಿಂದ ಅಲ್ಲ, ವಾಸ್ತವವಾಗಿ ವಿರುದ್ಧವಾಗಿ, ಅದೇನೇ ಇದ್ದರೂ ತಪ್ಪೇ ಆಗಿದೆ ಎಂದರು.
ಇದೀಗ ಎಲ್ಲಾ ತಪ್ಪುಗಳನ್ನು ಸರಿಪಡಿಸಲು ನಾನು ಪ್ರಧಾನಿಯಾಗಿ ನೇಮಕಗೊಂಡಿದ್ದೇನೆ. ನಾನು ನಮ್ಮ ದೇಶವನ್ನು ಕೇವಲ ಮಾತಿನಿಂದ ಅಲ್ಲ, ಬದಲಿಗೆ ಕೆಲಸ ಮಾಡುವ ಮೂಲಕ ಒಂದುಗೂಡಿಸುತ್ತೇನೆ. ಇದಕ್ಕಾಗಿ ನಾನು ಹಗಲಿರುಳು ಶ್ರಮಿಸುತ್ತೇನೆ. ಈಗ ನಂಬಿಕೆ ಗಳಿಸಿದ್ದೇನೆ, ಅದನ್ನು ಹಾಗೆಯೇ ಕಾಪಾಡಿಕೊಳ್ಳುತ್ತೇನೆ ಎಂದು ಸುನಾಕ್ ನುಡಿದರು.