ಹುಬ್ಬಳ್ಳಿ: ರಾಜಕೀಯ ಮತ್ತು ಚುನಾವಣೆ ಚಟುವಟಿಕೆಗಳಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಯಾವ ನೌಕರರು ಪಾಲ್ಗೊಳ್ಳಬಾರದು ಎಂದು ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿ 1971 ರ ನಿಯಮಾವಳಿ-9ರಲ್ಲಿ ಸಂಸ್ಥೆಯ ನೌಕರರು ಯಾವುದೇ ರೀತಿಯ ರಾಜಕೀಯ ಅಥವಾ ಚುನಾವಣಾ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ ಎಂದು ವಿವರಿಸಿದ್ದಾರೆ.
ಇನ್ನು ಸಂಸ್ಥೆಯ ಯಾವುದೇ ನೌಕರರು ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರವನ್ನಾಗಲಿ, ಪ್ರಭಾವ ಬೀರುವುದನ್ನಾಗಲೀ ಅಥವಾ ಇತರೆ ಯಾವುದೇ ರಾಜಕೀಯ- ಚುನಾವಣೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಾಗಲಿ ಮಾಡತಕ್ಕದಲ್ಲದೆಂದು ಉಲ್ಲೇಖದಲ್ಲಿ ತಿಳಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಿಷ್ಟೇ ಅಲ್ಲದೆ ಈ ಆದೇಶಗಳನ್ನು ಉಲ್ಲಂಘಿಸಿದ ಬಗ್ಗೆ ವರದಿಗಳು ಬಂದಲ್ಲಿ ಸಂಬಂಧಪಟ್ಟವರನ್ನು ನೌಕರರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ನಡೆದ ಮತ್ತು ಶಿಸ್ತು ನಿಯಮಾವಳಿ 1971 ರ ನಿಯಮಾವಳಿ 9ರನ್ವಯ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಸಂಬಂಧಪಟ್ಟವರೆಲ್ಲರೂ ಈ ಆದೇಶವನ್ನು, ಅವರ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ನೌಕರರ ಗಮನಕ್ಕೆ ತರುವ ಜೊತೆಗೆ ಅವರ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಕಚೇರಿಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ವಿಭಾಗಿಯ ಎಯಂತ್ರಣಾಧಿಕಾರಿಗಳು / ಕಾರ್ಯ ವ್ಯವಸ್ಥಾಪಕರು, ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ಎಲ್ಲ ಅಧಿಕಾರಿಗಳಿಗೂ ಆದೇಶ ಹೊರಡಿಸಿದ್ದಾರೆ.