ಕಲಬುರಗಿ: ವಿವಿಧ ಬೇಡಿಕೆಗಳ ಈಡೆರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಕೂಟದಿಂದ ಬೃಹತ್ ಸೈಕಲ್ ಅ.10ರಂದು ಬಳ್ಳಾರಿಯಲ್ಲಿ ಚಾಲನೆಗೊಂಡಿದ್ದು, ಇಂದಿಗೆ 18ನೇ ದಿನಗಳಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಕಲಬುರಗಿಯಲ್ಲಿ ಬೃಹತ್ ಸೈಕಲ್ ಜಾಥಾದ ಜತೆಗೆ ಮಹಾ ಸಮಾವೇಶವನ್ನು ನೌಕರರ ಕೂಟದ ಕಲಬುರಗಿ ವಿಭಾಗದ ಪದಾಧಿಕಾರಿಗಳು ಆಯೋಜಿಸಿದ್ದು, ಸ್ವಾಮೀಜಿಗಳು ಸೇರಿದಂತೆ ಹಲವು ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.
ಅಲ್ಲದೆ ಸ್ವಯಂ ಪ್ರೇರಣೆಯಿಂದ ನೂರಾರು ನೌಕರರು ಕುಟುಂಬ ಸವೇತರಾಗಿ ಈ ಸಮಾವೇಶದಲ್ಲಿ ಭಾಗವಹಿಸಲು ನಿನ್ನೆಯೇ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ತೆರಳಿದ್ದಾರೆ. ಜತೆಗೆ ನಾನು ಕುಟುಂಬ ಸಮೇತ ಕಾರ್ಯಕ್ರಮಕ್ಕೆ ಹೋಗುತ್ತಿದ್ದು ಸಾಧ್ಯವಾದರೆ ನೀವು ಬನ್ನಿ ಎಂದು ಕರೆ ನೀಡಿದ್ದಾರೆ.
ಇವರ ಜತೆಗೆ ಇಂದು (ಅ.27) ಕಲಬುರಗಿಯಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಕೂಟದ ಸಮಾವೇಶದಲ್ಲಿ ಸಾವಿರಾರು ನೌಕರರು ಮತ್ತು ಅವರ ಸ್ನೇಹಿತರು, ಕುಟುಂಬದವರು ಭಾಗವಹಿಸಬೇಕು ಎಂದು ಕಲಬುರಗಿ ವಿಭಾಗದ ಕೂಟದ ಪದಾಧಿಕಾರಿಗಳು ಮತ್ತು ಅಧ್ಯಕ್ಷರು ಕೂಡ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ನೌಕರರು ಕಳೆದ 17 ದಿನಗಳಿಂದ ಸೈಕಲ್ ಜಾಥಾ ನಡೆಸುತ್ತಿದ್ದು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಹೊರಟಿದ್ದಾರೆ.
ಕಲಬುರಗಿ ನಗರಕ್ಕೆ ಮಂಗಳವಾರವೇ ಜಾಥಾ ಆಗಮಿಸಿದ್ದು ಅದನ್ನು ಕೂಟ ಅದ್ದೂರಿಯಾಗಿ ಸ್ವಾಗತಿಸಿದೆ. ಇಂದು (ಅ.27) ನಗರದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿತಿಭಟನಾ ರ‍್ಯಾಲಿ ಹಾಗೂ ಸೈಕಲ್ ಜಾಥಾ ಜರುಗಲಿದ್ದು, ಸಾವಿರಾರು ನೌಕರರು ಭಾಗವಹಿಸುತ್ತಿದ್ದಾರೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.
ಇನ್ನು ಇಂದು ಕಲಬುರಗಿಯಲ್ಲಿ ನಡೆಯುತ್ತಿರುವ ಮಹಾ ಸಮಾವೇಶಕ್ಕೆ ಎಷ್ಟು ಮಂದಿ ನೌಕರರು ಭಾಗವಹಿಸುತ್ತಾರೆ ಎಂಬುದರ ಬಗ್ಗೆ ಇತರ ಸಂಘಟನೆಗಳು ಮತ್ತು ಸರ್ಕಾರವೂ ಎದುರು ನೋಡುತ್ತಿದೆ. ಒಂದು ವೇಳೆ ಅವರ ನಿರೀಕ್ಷೆಗೂ ಮೀರಿ ನೌಕರರು ಸಮಾವೇಶದಲ್ಲಿ ಭಾಗವಹಿಸಿದ್ದೆ ಆದರೆ, ನೌಕರರ ಕೂಟದ ಬೇಡಿಕೆಯಂತೆ ವೇತನ ಆಯೋಗದ ಮಾದರಿಯಲ್ಲಿ ನೌಕರರಿಗೆ ವೇತನ ಕೊಡಬೇಕಾಗುತ್ತದೆ ಎಂಬ ಬಗ್ಗೆ ಈಗಾಗಲೇ ಚರ್ಚೆಗಳು ಸರ್ಕಾರ ಮತ್ತು ಆಡಳಿತ ಮಂಡಳಿ ನಡುವೆ ನಡೆದಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಆದರೆ, ಅದಕ್ಕೆ ಪೂರಕವಾಗಿ ಇಂದು ನೌಕರರು ಎಷ್ಟರ ಮಟ್ಟಿಗೆ ಸೇರುತ್ತಾರೆ ಎಂಬುದರ ಮೇಲೆ ಸರ್ಕಾರ ಮತ್ತು ಆಡಳಿತ ಮಂಡಳಿ ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ನಾವು ಇನ್ನು ಕೆಲವೇ ಗಂಟೆಗಳು ಕಾದರೆ ಎಲ್ಲವೂ ತಿಳಿಯಲಿದೆ.