ಕಲಬುರಗಿ: ಕೆಚ್ಚೆದೆಯ ಹೋರಾಟದ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದ ನಮ್ಮ ಸಾರಿಗೆ ನೌಕರರು ಎಂಬ ಬರಹದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲೂ ಕಲಬುರಗಿಯಲ್ಲಿ ಇಂದು ನಡೆದ ಸಾರಿಗೆ ನೌಕರರ ಮಹಾ ಸಮಾವೇಶದ ಬಗ್ಗೆ ಸಮಸ್ತರು ಸಂತಸ ಹಂಚಿಕೊಳ್ಳುತ್ತಿದ್ದಾರೆ.
ಇದೇ ಅಕ್ಟೋಬರ್ 10ರಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ತವರು ಜಿಲ್ಲೆ ಬಳ್ಳಾರಿಯಲ್ಲಿ ಜಾಲನೆಗೊಂಡು ಸಾರಿಗೆ ನೌಕರರ ಕೂಟದ ನೇತೃತ್ವದಲ್ಲಿ ರಾಜ್ಯಾದ್ಯಂತ ಸಚರಿಸುತ್ತಿರುವ ಬೃಹತ್ ಸೈಕಲ್ ಜಾಥಾವು ಇಂದು ಕಲಬುರಗಿ ನಗರದಲ್ಲಿ ಮಹಾ ಸಮಾವೇಶ ಏರ್ಪಡಿಸಿತ್ತು.
ಸಮಾವೇಶಕ್ಕೂ ಮುನ್ನಾ ಜಿಲ್ಲಾಧಿಕಾರಿಗಳಿಗೆ ನೌಕರರ ಸಮಸ್ಯೆಗೆ ಮುಕ್ತಿ ನೀಡುವಂತೆ ಮನವಿ ಸಲ್ಲಿಸಲಾಯಿತು. ಈ ವೇಳೆ ಸುಮಾರು 3 ಸಾವಿರ ನೌಕರರು ಮತ್ತು ಅವರ ಕುಟುಂಬದವರು ಭಾಗವಹಿಸುವ ಮೂಲಕ ಸೈಕಲ್ ಜಾಥಾಕ್ಕೆ ಸಾಥ್ ನೀಡಿದರು.
ಬಳಿಕ ಸಮಾವೇಶಕ್ಕೂ ತೆರಳಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು. ಈ ಮೂಲಕ ನಾವು ಸಾರಿಗೆ ನೌಕರರು ಕೆಲವರನ್ನು ಹೊರತುಪಡಿಸಿದರೆ ಒಗ್ಗಟ್ಟಾಗೇ ಇದ್ದೇವೆ ಎಂಬ ಸಂದೇಶವನ್ನು ಸರ್ಕಾರ ಮತ್ತು ಆಡಳಿತ ಮಂಡಳಿಗೂ ತಲುಪಿಸಿದರು.
ಸಮಾವೇಶದಲ್ಲಿ ಭಾಗವಹಿಸುವ ಸಲುವಾಗಿಯೇ ನೂರಾರು ಕಿಲೋ ಮೀಟರ್ ಕ್ರಮಿಸಿ ನೂರಾರು ನೌಕರರು ಕಲಬುರಗಿ ತಲುಪಿದರು. ಅವರನ್ನು ಸಮಾವೇಶದ ಸ್ಥಳಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಕೂಟದ ಪದಾಧಿಕಾರಿಗಳು ಮಾಡಿದ್ದರು. ಅಲ್ಲದೆ ತಿಂಡಿ ಊಟದ ವ್ಯವಸ್ಥೆಯನ್ನು ಮಾಡಿದ್ದರು.
ಕಲಬುರಗಿ ಸಾರಂಗಮಠ ಶ್ರೀಶೈಲಂ, ಸುಲಫಲ ಮಠ ಶ್ರೀ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅವರು ಸಮಾವೇಶ ಸಾನಿಧ್ಯ ವಹಿಸಿದ್ದರು. ಇವರ ಜತೆಗೆ ಅನೇಕ ಗಣ್ಯರು ಭಾಗವಹಿಸುವ ಮೂಲಕ ನೌಕರರ ನ್ಯಾಯಯುತ ಹೋರಾಟಕ್ಕೆ ಸಾಥ್ ನೀಡಿದರು.