ಕಲಬುರಗಿ: ಕೊಟ್ಟ ಮಾತನ್ನು ಪ್ರಜಾಪ್ರಭುತ್ವದಲ್ಲಿ ಸರ್ಕಾರವೇ ತಪ್ಪಿದರೆ ಇನ್ನು ಯಾರನ್ನು ಕೇಳಬೇಕು ಎಂದು ಶ್ರೀ ಶೈಲಂ ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟವು ಗುರುವಾರ ಹಮ್ಮಿಕೊಂಡಿದ್ದ ಸಾರಿಗೆ ನೌಕರರ ಮಹಾ ಸಮಾವೇಶ ಉದ್ಘಾ ಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಜನಸೇವೆಯಲ್ಲಿ ತೊಡಗಿದ್ದಾರೆ. ಆದರೆ ಅವರಲ್ಲಿ ಕೆಲವು ಸಿಬ್ಬಂದಿಗೆ 17 ತಿಂಗಳಿಂದ ಸಂಬಳವೇ ಇಲ್ಲ. ಇತ್ತ ಸರ್ಕಾರ ತಾನು ಸಾರಿಗೆ ನೌಕರರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮತ್ತು ಕಷ್ಟದಲ್ಲಿದ್ದವರಿಗೆ ಸ್ಪಂದಿಸುವುದು ಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಆದ್ಯಕರ್ತವ್ಯ. ಆದರೆ, ಅದೇ ಮಾತು ತಪ್ಪಿದರೆ ಯಾರನ್ನು ಕೇಳಬೇಕು ಎಂದು ಸರ್ಕಾರದ ನಡೆಗೆ ಅಸಮಾಧಾನ ಹೊರಹಾಕಿದರು.
ಇನ್ನು ಸಾರಿಗೆ ನೌಕರರು ಒಂದು ದಿನ ಹೋರಾಟಕ್ಕಿಳಿದರೆ ಇಡೀ ರಾಜ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಸಾರಿಗೆ ನೌಕರರ ಸಮಸ್ಯೆಗಳನ್ನು ಸಚಿವ ಶ್ರೀರಾಮುಲು ತಕ್ಷಣ ಈಡೇರಿಸಬೇಕು. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ, ಇರುವಾಗ ನೌಕರರಿಗೆ ಒಳ್ಳೆಯದನ್ನು ಮಾಡಿ, ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಸಲಹೆ ನೀಡಿದರು.
40 ದಿನಗಳ ಗಡುವು ಹಾಕಿಕೊಳ್ಳಿ: ಸಾರಿಗೆ ಸಂಸ್ಥೆಯ ನೌಕರರು ಎರಡು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಿವಿ ಕೇಳುತ್ತಿಲ್ಲ ಎಂಬಂತೆ ವರ್ತಿಸುತ್ತಿದೆ. ಹೀಗಾಗಿ ಇನ್ನೂ ಬೇಡಿಕೆಗಳು ಈಡೇರುತ್ತಿಲ್ಲ ಎಂದು ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು 40 ದಿನಗಳ ಗಡುವು ಹಾಕಿಕೊಳ್ಳಿ. ನಂತರ ಚುನಾವಣಾ ನೀತಿ ಸಂಹಿತೆ ಘೋಷಣೆ ಆಗಲಿದೆ. ಅಷ್ಟರಲ್ಲೇ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿಯಿರಿ. ಇದಕ್ಕೆ ಸಂಬಂಧಪಟ್ಟ ಸಚಿವರು, ಶಾಸಕರು ಹಾಗೂ ಐಎಎಸ್ ಅಧಿಕಾರಿಗಳ ಮನವೊಲಿಸಲು ಯತ್ನಿಸಿ ಎಂದರು.
ಜನಪ್ರತಿನಿಧಿಗಳು ಈ ಬಾರಿ ಗೆಲ್ಲಿಸಿರಿ, ಮುಂದೆ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದರೆ ಕೇಳಬೇಡಿ. ಹಣಕಾಸು ಪರಿಸ್ಥಿತಿ ಸರಿಯಿದೆ. ಕೇಂದ್ರ ಸರ್ಕಾರವೇ ವೇತನ ಆಯೋಗ ರಚಿಸಿದರೆ ತಡವಾಗುತ್ತದೆ. ಆದ್ದರಿಂದ ತಕ್ಷಣ ವೇತನ ಪರಿಷ್ಕರಣೆ ಮಾಡಿ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಈ ಹಿನ್ನೆಲೆಯಲ್ಲಿ ನೇರವಾಗಿ ನೌಕರರಿಗೆ ವೇತನ ನೀಡಬೇಕು. ನಾನು ಸಂಘಟಿಸಿದ ಹೋರಾಟಗಳು ಒಂದು ವರ್ಷದೊಳಗೇ ಇತ್ಯರ್ಥವಾಗಿವೆ ಎಂದರು.
ನಿಮ್ಮ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇವೆ: ನೌಕರರಿಗೆ ಸರ್ಕಾರ ಏಳನೇ ವೇತನ ಆಯೋಗ ರಚಿಸಿದೆ. ಅದೇ ರೀತಿ ಸಾರಿಗೆ ನೌಕರರಿಗೂ ರಚಿಸಲಿ. ನಿಮ್ಮ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇವೆ. ಎಲ್ಲಕಡೆ ಕಾಲೆಳೆಯುವವರು ಇದ್ದೇ ಇರುತ್ತಾರೆ. ಇದಕ್ಕೆಲ್ಲ ಮಹತ್ವ ನೀಡದೆ ಧೈರ್ಯದಿಂದ ಮುನ್ನುಗ್ಗಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ಸಲಹೆ ನೀಡಿದರು.
ಸಂಸ್ಥೆಯು ಲಾಭದಲ್ಲಿದ್ದು, ರಾಜ್ಯ ದ 1.30 ಲಕ್ಷ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿಯನ್ನು ತಕ್ಷಣ ಅಳವಡಿಸಬೇಕು. ನಿಗಮದಿಂದ ಮಾನ್ಯತೆ ಪಡೆದಿರುವ ಕಾರ್ಮಿಕ ಸಂಘಟನೆಯಲ್ಲಿ ಬಹುತೇಕರು ನಿವೃತ್ತ ಕಾರ್ಮಿಕರಿದ್ದಾರೆ. ಅವರು ಸಮಾನ ಕೆಲಸಕ್ಕೆ , ಸಮಾನ ವೇತನ ಬೇಡಿಕೆಗೆ ವಿರುದ್ಧವಾಗಿದ್ದಾರೆ. ಪ್ರತಿ ಕೆಲಸಕ್ಕೂ ತಮ್ಮ ಬಳಿಯೇಬರಬೇಕು ಎಂದು ಬಯಸುತ್ತಾರೆ ಎಂದು ಕೂಟದ ಗೌರವ ಅಧ್ಯಕ್ಷ ಶೌಕತ್ ಅಲಿ ಆಲೂರ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಕಾರ್ಮಿಕ ಸಂಘಟನೆಯವರಿಗೆಲ್ಲ ಉಚಿತ ಪಾಸ್, ಹೋದಲ್ಲೆಲ್ಲ ಹಾರ ತುರಾಯಿಗಳು ಸಿಗುತ್ತವೆ. ಹಾಗಾಗಿ, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಪರೋಕ್ಷವಾಗಿ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಮುಖಂಡರ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ಚಂಪಕಾವತಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ , ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ, ಎನ್.ಸತೀಶ, ಕೃಷ್ಣಾ ಜಿ, ತಿಪ್ಪೇಸ್ವಾಮಿ, ಸಂತೋಷ, ಮಕಂದರ್ ಸಾಬ್, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ವಿಜಯನಗರ ಜಿಲ್ಲೆಯ ಸಾರಿಗೆ ನೌಕರರು ಸೇರಿದಂತೆ ನೂರಾರು ನೌಕರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿಯಲ್ಲಿ ಸಮಾವೇಶ ಪೂರ್ಣಗೊಳಿಸಿದ ನೌಕರರ ಕೂಟದ ಸೈಕಲ್ ಜಾಥಾ ವಿಜಯಪುರದತ್ತ ಹೊರಟಿದೆ.