ಬೆಂಗಳೂರು : ಇನ್ನು ಮುಂದೆ ನಿಮ್ಮ ವಾಹನಗಳು ಕಳುವಾದರೆ ನೀವು ಪೊಲೀಸ್ ಠಾಣೆಗೆ ಹೋಗುವ ಅಗತ್ಯವಿಲ್ಲ. ಕುಂತಲ್ಲೇ ಆನ್‌ಲೈನ್ ಮೂಲಕ ಕಳವುವಾದ ಬಗ್ಗೆ ದೂರು ದಾಖಲಿಸಲು ಪೊಲೀಸ್ ಇಲಾಖೆ ವ್ಯವಸ್ಥೆ ಮಾಡಿದೆ.
ಅಷ್ಟೇ ಅಲ್ಲ ನೀವು ದಾಖಲಿಸಿದ ದೂರಿಗೆ ಪ್ರತಿಯಾಗಿ ‘ಇ-ಎಫ್‌ಐಆರ್’ ಒದಗಿಸಿ ತನಿಖೆ ಚುರುಕುಗೊಳಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಹೌದು! ಸಾರ್ವಜನಿಕರ ವಾಹನಗಳು ಕಳುವಾದ ಸಂದರ್ಭದಲ್ಲಿ ತುರ್ತಾಗಿ ಆನ್‌ಲೈನ್ ಮೂಲಕ ದೂರು ದಾಖಲಿಸಲು ಅವಕಾಶ ಕಲ್ಪಿಸಿರುವ ಪೊಲೀಸ್ ಇಲಾಖೆ, ಆ ದೂರುಗಳಿಗೆ ಪ್ರತಿಯಾಗಿ ‘ಇ-ಎಫ್‌ಐಆರ್’ ಒದಗಿಸಿ ತನಿಖೆ ಚುರುಕುಗೊಳಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ರಾಜಧಾನಿ ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ವಾಹನಗಳ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ವಾಹನಗಳ ಮಾಲೀಕರು ಠಾಣೆಗೆ ಅಲೆದಾಡಿ ದೂರು ದಾಖಲಿಸುತ್ತಿದ್ದಾರೆ. ಅದನ್ನು ಸರಳೀಕರಣ ಮಾಡಲು ದ್ವಿಚಕ್ರ ವಾಹನ, ಕಾರು, ಆಟೊ, ಸರಕು ಸಾಗಣೆ ವಾಹನಗಳು ಕಳುವಾದಾಗ ಆನ್‌ಲೈನ್ ಮೂಲಕ ದೂರು ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದು, ರಾಜ್ಯೋತ್ಸವ ದಿನವಾದ ಮಂಗಳವಾರ ಈ ವ್ಯವಸ್ಥೆಗೆ ಅಧಿಕೃತ ಚಾಲನೆ ನೀಡಲಾಗಿದೆ.
ಕೆಲವೆಡೆ ಪ್ರಕರಣ ದಾಖಲಿಸುವ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಇದರಿಂದಾಗಿ ಪೊಲೀಸ್ ಇಲಾಖೆ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡು ಕೊಳ್ಳುವುದಕ್ಕಾಗಿ ಪೊಲೀಸರು, ಆನ್‌ಲೈನ್ ವ್ಯವಸ್ಥೆ ಮೊರೆಹೋಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ‘ಸಾರ್ವಜನಿಕರ ವಾಹನಗಳು ಕಳುವಾದರೆ, ಎಫ್‌ಐಆರ್ ದಾಖಲಿಸುವುದು ಇನ್ನು ಮುಂದೆ ಸುಲಭವಾಗಲಿದೆ. ಜನರು ಆನ್‌ಲೈನ್ ಮೂಲಕ ದೂರು ನೀಡಿದರೆ, ಸಂಬಂಧಪಟ್ಟ ಠಾಣೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿವರಿಸಿದ್ದಾರೆ.
‘ಸಾರ್ವಜನಿಕ ಸೇವಾ ಕೇಂದ್ರ ವ್ಯವಸ್ಥೆ ಮೂಲಕ ಆನ್‌ಲೈನ್ ದೂರು ಸ್ವೀಕಾರ ಪ್ರಕ್ರಿಯೆ ನಡೆಯಲಿದೆ. ವಾಹನಗಳ ಮಾಲೀಕರು ಠಾಣೆಗಳಿಗೆ ಅಲೆಯುವುದನ್ನು ತಪ್ಪಿಸುವುದು ಈ ವ್ಯವಸ್ಥೆಯ ಗುರಿಯಾಗಿದೆ’ ಎಂದು ತಿಳಿಸಿದರು.
ದೂರು ದಾಖಲಿಸುವುದು ಹೇಗೆ?: ಕರ್ನಾಟಕ ಪೊಲೀಸ್ ಇಲಾಖೆಯ https://ksp.karnataka.gov.in/ ಜಾಲತಾಣಕ್ಕೆ ಭೇಟಿ ನೀಡಬೇಕು.
ಜಾಲತಾಣದ ಎಡಬದಿಯ ಆಯ್ಕೆಯಲ್ಲಿರುವ ‘ನಾಗರಿಕ ಕೇಂದ್ರಿತ ತಾಣ’ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ, ‘ನಾಗರಿಕ ಕೇಂದ್ರಿತ ಪೋರ್ಟಲ್ ಕರ್ನಾಟಕ ರಾಜ್ಯ ಪೊಲೀಸ್’ ಪುಟ ತೆರೆದುಕೊಳ್ಳುತ್ತದೆ. ಬಳಿಕ, ಅಲ್ಲಿಯ ಲಾಗಿನ್ ಬಟನ್ ಒತ್ತಬೇಕು.
‘ನ್ಯೂ ಟು ಎಸ್‌ಎಸ್‌ಒ’ ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ ಬಳಸಿಕೊಂಡು ಹೊಸ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಸೃಷ್ಟಿಸಬೇಕು. ನಂತರ, ಕಳವಾದ ವಾಹನದ ವಿವರ ದಾಖಲಿಸಿ ದೂರು ಸಲ್ಲಿಸಬೇಕು. ಇದಾದ ಬಳಿಕ, ಸಂಬಂಧಪಟ್ಟ ಠಾಣೆಗೆ ಸಂದೇಶ ರವಾನೆಯಾಗಲಿದೆ. ನಂತರವೇ, ಸಂಬಂಧಪಟ್ಟ ಠಾಣೆಗಳ ತನಿಖಾಧಿಕಾರಿ ಸಹಿ ಸಮೇತ ‘ಇ-ಎಫ್‌ಐಆರ್’ ಪ್ರತಿ ಲಭ್ಯವಾಗಲಿದೆ.
ಈ ಎಫ್‌ಐಆರ್ ಪ್ರತಿಗೆ ಕಾನೂನುಬದ್ಧ ಮಾನ್ಯತೆ ಇದ್ದು, ಇದರಲ್ಲಿರುವ ಸಾರಾಂಶವನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಲಿದ್ದಾರೆ. ಕಳವಾದ ವಾಹನಗಳು ಪತ್ತೆಯಾದರೆ ಮಾಲೀಕರಿಗೆ ಪೊಲೀಸರೇ ಮಾಹಿತಿ ನೀಡಲಿದ್ದಾರೆ.