ಗುಜರಾತ್: 140ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಗುಜರಾತ್‌ನ ಮೊರ್ಬಿ ಸೇತುವೆ ನವೀಕರಣ ಜವಾಬ್ದಾರಿ ನಿರ್ವಹಿಸಿದ್ದ ಕಂಪೆನಿ ದುರಸ್ತಿಗೆ ನಿಗದಿಪಡಿಸಿದ 2 ಕೋಟಿ ರೂ.ಗಳಲ್ಲಿ 12 ಲಕ್ಷ ರೂ.ಗಳನ್ನು ಮಾತ್ರ ದುರಸ್ತಿಗೆ ವ್ಯಯ ಮಾಡಿದ್ದು, ಉಳಿದ ಹಣವನ್ನು ಗುಳುಂ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ಅಜಂತಾದ ಅಂಗಸಂಸ್ಥೆ ಅಹಮದಾಬಾದ್ ಮೂಲದ ಒರೆವಾ ಸಮೂಹವು ಈ ತೂಗುಸೇತುವೆ ದುರಸ್ತಿ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಸೇತುವೆ ದುರಸ್ತಿಗೆ ಸರ್ಕಾರದಿಂದ 2 ಕೋಟಿ ರೂ. ಮಂಜೂರಾಗಿತ್ತು.
ಆದರೆ, ಕಂಪೆನಿಯು ಶೇ. 6ರಷ್ಟು ಅಂದರೆ ಕೇವಲ 12 ಲಕ್ಷ ರೂ.ಗಳನ್ನು ದುರಸ್ತಿ ಕಾರ್ಯಕ್ಕೆ ವ್ಯಯಿಸಿದೆಯಷ್ಟೆ ಎಂದು ಹೇಳಲಾಗುತ್ತಿದೆ. ಇನ್ನು ಉಳಿದ ಹಣ ಭ್ರಷ್ಟರ ಪಾಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಒರೆವಾ ಗ್ರೂಪ್‌ಗೆ ವಹಿಸಲಾಗಿದ್ದ ನಿರ್ವಹಣೆ ಜವಾಬ್ದಾರಿಯನ್ನು ಆ ಸಂಸ್ಥೆಯು ಮತ್ತೊಂದು ಸಂಸ್ಥೆಗೆ ವಹಿಸಿತ್ತು. ಧ್ರಂಗಾದ್ರ ಮೂಲದ ದೇವಪ್ರಕಾಶ್ ಸಲ್ಯೂಷನ್‌ಗೆ ಗುತ್ತಿಗೆ ನೀಡಿತ್ತು. ಈ ಗುತ್ತಿಗೆ ಸಂಸ್ಥೆಯವರಿಗೆ ದುರಸ್ತಿ ತಾಂತ್ರಿಕತೆಯ ಜ್ಞಾನವೇ ಇರಲಿಲ್ಲ ಎಂದು ತಿಳಿದು ಬಂದಿದೆ.
ದೇವಪ್ರಕಾಶ್ ಸಲ್ಯೂಷನ್‌ನಿಂದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ದುರಸ್ತಿಗೆ ಮಾಡಿದ ಖರ್ಚಿನ ಮೊತ್ತವನ್ನು ಉಲ್ಲೇಖಿಸಲಾಗಿದೆ. ವಸಾಹತುಶಾಹಿ ಕಾಲದ ತೂಗು ಕೇಬಲ್ ಸೇತುವೆಯ ನವೀಕರಣ ಹಾಗೂ ದುರಸ್ತಿ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ಈ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು.
ಅಕ್ಟೋಬರ್ 24ರಂದು ಒರೆವಾ ಗ್ರೂಪ್ ಅಧ್ಯಕ್ಷ ಜಯಸುಖ್ ಪಟೇಲ್ ಅವರು ಸೇತುವೆ ಸಾರ್ವಜನಿಕರ ಬಳಕೆಗೆ ಸುರಕ್ಷಿತವಾಗಿದೆ ಎಂದು ಘೋಷಿಸಿದ್ದ ಹಿನ್ನೆಲೆಯಲ್ಲಿ ಸೇತುವೆ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆದರೆ, ಅದು ಕುಸಿದು ಬಿದ್ದು 140ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು ಅಲ್ಲದೆ ನೂರಾರು ಜನ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.