ಪೋರ್ಟ್‍ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ಕೇಂದ್ರಾಡಳಿತ ಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ (Ex-Andaman chief secretary) ಜಿತೇಂದ್ರ ನಾರಾಯಣ್ (Jitendra Narain) ಅವರನ್ನು 21 ವರ್ಷದ ಯುವತಿ ನೀಡಿದ ಸಾಮೂಹಿಕ ಅತ್ಯಾಚಾರದ ದೂರಿನ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ನಾರಾಯಣ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ಬೆನ್ನಲ್ಲೇ ಮಾಜಿ ಮುಖ್ಯ ಕಾರ್ಯದರ್ಶಿಯನ್ನು ಬಂಧಿಸಲಾಗಿದೆ. ಆದರೆ ನಾನು ಇಡೀ ಪಿತೂರಿಯ ಬಲಿಪಶು ಎಂದು ಬಂಧನದ ಬಳಿಕ ನಾರಾಯಣ್ ಹೇಳಿಕೊಂಡಿದ್ದಾರೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಕಟವಾಗುತ್ತಿದ್ದಂತೆ ಪೊಲೀಸರ ತಂಡ ನಾರಾಯಣ್ ವಾಸ್ತವ್ಯ ಇದ್ದ ಖಾಸಗಿ ರೆಸಾರ್ಟ್ ಮೇಲೆ ದಾಳಿ ನಡೆಸಿ ಬಿಗಿ ಭದ್ರತೆಯ ನಡುವೆ ಅವರನ್ನು ಬಂಧಿಸಿತು. ಬಂಧನದ ಬಳಿಕ ಈ ಹಿರಿಯ ಐಎಎಸ್ ಅಧಿಕಾರಿಯನ್ನು ನೇರವಾಗಿ ಪೊಲೀಸರು ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದರು.
“ಈ ಸುಳ್ಳು.. ಸಂಚು ಹಾಗೂ ಎಲ್ಲ ವಿಷಯಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡುತ್ತೇನೆ” ಎಂದು ಆಸ್ಪತ್ರೆಯಿಂದ ಹೊರಬರುವ ವೇಳೆಗೆ ಮಾಧ್ಯಮದವರ ಎದುರು ನಾರಾಯಣ್ ನುಡಿದರು. ಈ ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡ ಮೂರು ಬಾರಿ ನಾರಾಯಣ್ ಅವರನ್ನು ತನಿಖೆಗೆ ಒಳಪಡಿಸಿತ್ತು.
ಸರ್ಕಾರಿ ಉದ್ಯೋಗ ನೀಡುವ ಆಮಿಷ ಒಡ್ಡಿ ಮುಖ್ಯ ಕಾರ್ಯದರ್ಶಿಯವರ ನಿವಾಸಕ್ಕೆ ಕರೆದೊಯ್ದು ನಾರಾಯಣ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು 21 ವರ್ಷದ ಯುವತಿ ಆಪಾದಿಸಿದ್ದರು.
ಮಾಜಿ ಮುಖ್ಯ ಕಾರ್ಯದರ್ಶಿ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ನಾರಾಯಣ್‍ಗೆ ನಿರ್ದೇಶಿಸಿತು ಹಾಗೂ ನವೆಂಬರ್ 11ರ ಒಳಗೆ ಅರ್ಜಿ ಇತ್ಯರ್ಥಪಡಿಸುವಂತೆ ಆದೇಶ ನೀಡಿತ್ತು.
ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವಾಗ, ಮಾಜಿ ಮುಖ್ಯ ಕಾರ್ಯದರ್ಶಿಯ ನಿರೀಕ್ಷಣಾ ಅರ್ಜಿಯನ್ನು ಹೇಗೆ ಮಾನ್ಯ ಮಾಡಲು ಸಾಧ್ಯ ಎಂದು ನ್ಯಾಯಾಧೀಶರು ಅಚ್ಚರಿ ವ್ಯಕ್ತಪಡಿಸಿದರು.