ಹುಲ್ಲೇಮನೆ: ಹುಲ್ಲೇಮನೆ ಗ್ರಾಮದಲ್ಲಿ ನಿನ್ನೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಅಟ್ಟಾಡಿಸಿದ್ದರು. ಇಂದು ಬೆಳಗ್ಗೆ ಅದೇ ಪ್ರದೇಶಕ್ಕೆ ತನ್ನ ನೂರಾರು ಬೆಂಬಲಿಗರೊಂದಿಗೆ ಶಾಸಕರು ಭೇಟಿ ನೀಡಿದರು.
ಕಾಡಾನೆ ತುಳಿತಕ್ಕೆ ಬಲಿಯಾದ ಮಹಿಳೆಯ ಅಂತ್ಯಕ್ರಿಯೆಯಲ್ಲಿ ಶಾಸಕರು ಭಾಗಿಯಾದರು. ಇದೇ ವೇಳೆ ತಮ್ಮ ಮೇಲೆ ನಡೆದ ಹಲ್ಲೆ ಸಂಬಂಧ ಗ್ರಾಮಸ್ಥರ ವಿರುದ್ಧ ಯಾವುದೇ ದೂರುಗಳನ್ನು ದಾಖಲಿಸಬೇಡಿ ಗ್ರಾಮದ ಮುಖಂಡರು ಶಾಸಕರಲ್ಲಿ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕರು ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸವನ್ನು ಯಾರೂ ಕೂಡ ಮಾಡಬಾರದು. ಅದು ಕಾನೂನು ಉಲ್ಲಘನೆಯಾಗುತ್ತಿದೆ. ಬಳಿಕ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ಇನ್ನು ಆನೆಯನ್ನು ಹಿಡಿಯುವ ನಿಟ್ಟಿನಲ್ಲಿ ಸರ್ಕಾರದ ನೀತಿ ನಿಯಮಗಳಡಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಆದರೆ ನಿನ್ನೆಯ ದಿನ ಕತ್ತಿ, ದೊಣ್ಣೆಗಳನ್ನು ಹಿಡಿದುಕೊಂಡು ಯಾವ ರೀತಿಯಲ್ಲಿ ವರ್ತಿಸಿದ್ದಾರೆ ಅನ್ನೋದು ಎಲ್ಲರ ಮೊಬೈಲ್ ಗಳಲ್ಲಿಯೂ ಓಡಾಡುತ್ತಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ನಿನ್ನೆ ಭಾನುವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು, ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಕ್ಷಮೆಯಾಚಿಸಿದರು.