ಬೆಂಗಳೂರು ಗ್ರಾಮಾಂತರ : ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ನಗರದ ಒಳಚರಂಡಿ ನೀರು, ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ಬಿಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ದೊಡ್ಡಬಳ್ಳಾಪುರ ನಗರದ ನಾಗರಕೆರೆ ಹಾಗೂ ತಾಲೂಕಿನ ಚಿಕ್ಕತುಮಕೂರು ಎಸ್ಟಿಪಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಾಗರಕೆರೆಗೆ ಏಳೆಂಟು ಕಡೆ ಮನೆಗಳ ಯುಜಿಡಿ ನೀರು, ಮಗ್ಗಗಳ ಡೈಯಿಂಗ್ ನೀರು ಬಂದು ಸೇರುತ್ತಿದೆ. 2008ರಲ್ಲಿ ಕೆರೆ ಮಧ್ಯಭಾಗದಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ಪೈಪ್ಲೈನ್ ನಿರ್ಮಿಸಲಾಗಿದೆ. ಇದರಿಂದಲೂ ಯುಜಿಡಿ ನೀರು ನೇರವಾಗಿ ಕೆರೆಗೆ ಸೇರುತ್ತಿದೆ. ಈ ಬಗ್ಗೆ ನಾಗರಿಕರಿಂದ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಖುದ್ದು ವೀಕ್ಷಣೆ ನಡೆಸಿ, ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ದೊಡ್ಡಬಳ್ಳಾಪುರದ 26 ವಾರ್ಡುಗಳಲ್ಲಿ ಮಾತ್ರ ಯುಜಿಡಿ ಸಂಪರ್ಕವಿದೆ. ಉಳಿದ ಐದು ವಾರ್ಡುಗಳಲ್ಲಿ ಇಲ್ಲ. ಈಗಿರುವ ಯುಜಿಡಿ ಸಂಪರ್ಕವೂ ಅಸಮರ್ಪಕವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಡಿಪಿಆರ್ ಸಿದ್ದಪಡಿಸುವಂತೆ ಸೂಚಿಸಲಾಗಿದೆ. ಎಸ್ಟಿಪಿ ಘಟಕವನ್ನು ನಾವಿನ್ಯ ತಂತ್ರಜ್ಞಾನ ಬಳಸಿ ನಿರ್ಮಿಸಬೇಕು. ಯುಜಿಡಿ, ಕೈಗಾರಿಕೆಗಳಿಂದ ಬರುವ ತ್ಯಾಜ್ಯ ನೀರನ್ನು ಮೂಲದಲ್ಲಿಯೇ ಸಂಸ್ಕರಿಸಿ ಕೆರೆಗೆ ಬಿಡುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಒತ್ತುವರಿ ತೆರವಿಗೆ ಸೂಚನೆ: 175 ಎಕರೆ ವಿಸ್ತೀರ್ಣದ ನಾಗರಕೆರೆಯಲ್ಲಿ ಕೆಲವೆಡೆ ಕೆರೆ ಜಾಗ ಒತ್ತುವಾರಿಯಾಗಿದೆ. ಪರಿಶೀಲಿಸಿ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಈಗಾಗಲೇ ಕೆರೆಯ ಸರ್ವೇ ಮಾಡಲಾಗಿದೆ. ಒತ್ತುವರಿಯಾಗಿರುವ ಕಡೆ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಂದಾಜಿನ ಪ್ರಕಾರ 20 ಎಕರೆಗೂ ಹೆಚ್ಚು ಜಾಗ ಒತ್ತುವರಿಯಾಗಿದೆ ಎನ್ನಲಾಗಿದೆ.
ಪಕ್ಷಿ ಪ್ರಬೇಧಗಳ ಆವಾಸ ಸ್ಥಾನ: ನಾಗರಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳಿವೆ. ನೂರಾರು ಜಾತಿಯ ವಲಸೆ ಪಕ್ಷಿಗಳು ಆಗಮಿಸುತ್ತವೆ. ಇಂತಹ ಜೀವವೈವಿದ್ಯ ತಾಣವಾದ ನಾಗರಕೆರೆಯನ್ನು ಸಂರಕ್ಷಿಸಬೇಕು ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದ್ ಜಿಲ್ಲಾಧಿಕಾರಿ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಆರ್.ಲತಾ ಅವರು ತ್ವರಿತಗತಿಯಲ್ಲಿ ಕೆರೆ ಸಂರಕ್ಷಣೆಗೆ ಕ್ರಮ ಜರುಗಿಸಲಾಗುವುದು. ಡಿಪಿಆರ್ ಸಿದ್ಧಪಡಿಸುವಾಗ ತಜ್ಞರ ಅಭಿಪ್ರಾಯ, ಸಲಹೆ ಸೂಚನೆ ಸ್ವೀಕರಿಸಬೇಕು ಎಂದು ನಗರಸಭೆ ಆಯುಕ್ತ ಶಿವಶಂಕರ್ ಅವರಿಗೆ ಸೂಚಿಸಿದರು.
ಅರ್ಕಾವತಿ ಪಾತ್ರದ ಚಿಕ್ಕತುಮಕೂರು, ದೊಡ್ಡ ತುಮಕೂರು ಕೆರೆಗಳು ಸಂಪೂರ್ಣ ಕಲುಷಿತವಾಗಿದ್ದು, ಜಲಮೂಲ ಉಳಿವಿಗೆ ಜಿಲ್ಲಾಡಳಿತ ಮುಂದಾಗಬೇಕು ಎಂದು ದೊಡ್ಡತುಮಕೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್ ಒತ್ತಾಯಿಸಿದರು. ಅದರಂತೆ ಚಿಕ್ಕತುಮಕೂರು ಎಸ್ಟಿಪಿ ಘಟಕ ವೀಕ್ಷಣೆಗೆ ಜಿಲ್ಲಾಧಿಕಾರಿ ಆರ್. ಲತಾ ತೆರಳಿದರು.
ಸಂಸ್ಕರಿಸದಿದ್ದರೆ ಫ್ಯಾಕ್ಟರಿ ಬಂದ್ ಮಾಡಿ: ಬಣ್ಣ ಹಾಗೂ ರಸಾಯನಿಕ ಕೈಗಾರಿಕೆಗಳು ಹೊರ ಬಿಡುತ್ತಿರುವ ವಿಷಯುಕ್ತ ನೀರಿನಿಂದ ಕೆರೆಗಳು ಸಂಪೂರ್ಣ ಮಲಿನಗೊಂಡಿವೆ. ಕೈಗಾರಿಕೆಗಳು ಮೂಲದಲ್ಲಿಯೇ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗೆ ಬಿಡಬೇಕು. ಉದಾಸೀನ ಮಾಡಿ ಜಲಮೂಲ ಹಾಳು ಮಾಡುವ ಕೈಗಾರಿಕೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಬಂದ್ ಮಾಡಿಸಿ. ನಿಮ್ಮನ್ನು ಕಂಡರೆ ಕೈಗಾರಿಕೆಗಳು ಹೆದರಬೇಕು. ಅಂತದ್ದರಲ್ಲಿ ನೀವೇ ಹೆದರುತ್ತೀರಾ ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.
ಬಾಶೆಟ್ಟಿಹಳ್ಳಿಯಲ್ಲಿ 312 ಕೈಗಾರಿಕೆಗಳಿವೆ. ಕೆಐಎಡಿಬಿ ಬಳಿ ಜಮೀನು ಇದ್ದರೆ ಮುರ್ನಾಲ್ಕು ಎಕರೆ ಪ್ರದೇಶದಲ್ಲಿ ಪ್ರತ್ಯೇಕ ಟ್ರೀಟ್ ಮೆಂಟ್ ಪ್ಲಾಂಟ್ ಮಾಡಬಹುದು. ಈ ಬಗ್ಗೆ ಗಮನ ಹರಿಸಿ ಎಂದು ತಹಶೀಲ್ದಾರ್ ಮೋಹನಕುಮಾರಿ ಅವರಿಗೆ ಸೂಚಿಸಿದರು.
ಕ್ರಮ ಕೈಗೊಳ್ಳುವಲ್ಲಿ ಹಿಂದೇಟು: ಆರೋಪ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಕೈಗಾರಿಕೆಗಳು ತ್ಯಾಜ್ಯ ನೀರನ್ನು ಕೆರೆಗೆ ಬಿಟ್ಟು ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೆ, ಅವರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೊಡ್ಡತುಮಕೂರು ಹಾಗೂ ಚಿಕ್ಕತುಮಕೂರು ಗ್ರಾಮಸ್ಥರು ದೂರಿದರು.
ಕೆಲ ದಿನಗಳ ಹಿಂದೆ ಜೋದಾನಿ ಕಂಪೆನಿ ಕಲುಷಿತ ನೀರು ಬಿಟ್ಟ ಕಾರಣ ಜಲಚರಗಳು ಸತ್ತಿದ್ದವು. ಅವರ ವಿರುದ್ದ ಈವರೆಗು ಕ್ರಮ ಜರುಗಿಸಿಲ್ಲ. ಅದೇ ರೀತಿ ಅನುಗ್ರಹ ಕೆಮಿಕಲ್ಸ್ ಕಂಪೆನಿ ಕೂಡ ವಿಷಯುಕ್ತ ನೀರು ಹರಿಸುತ್ತಿದೆ. ಈ ಹಿಂದಿನ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಮೇಶ್ ಅವರು ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದ್ದರು. ಆದರೆ, ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಲಾಯಿತು ಎಂದು ಆರೋಪಿಸಿದರು.
ಐಐಎಸ್ಸಿಗೆ ನೀರಿನ ಸ್ಯಾಂಪಲ್: ಬಾಶೆಟ್ಟಿಹಳ್ಳಿ ಸೇರಿದಂತೆ ಕಲುಷಿತಗೊಂಡಿರುವ ಕೆರೆ ವ್ಯಾಪ್ತಿಯ ಗ್ರಾಮಗಳಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕಗಳಿಂದ ಸ್ಯಾಂಪಲ್ ಗಳನ್ನು ಐಐಎಸ್ಸಿಗೆ ರವಾನಿಸಲು ಸೂಚಿಸಿದ್ದೇನೆ. ಮನುಷ್ಯನಿಗೆ ಬದುಕಲು ಅತ್ಯಗತ್ಯವಾಗಿ ಬೇಕಾದ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಆದ್ಯತೆ ನೀಡಬೇಕು. ಐಐಎಸ್ಸಿಯಲ್ಲಿ ಹಲವು ಮಾನದಂಡಗಳಲ್ಲಿ ನೀರಿನ ಪರೀಕ್ಷೆ ನಡೆವುದರಿಂದ ನಿಖರ ಫಲಿತಾಂಶ ಸಿಗಲಿದೆ. ವರದಿ ಪಡೆದ ನಂತರ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶಾಲಿನಿ, ತಹಸೀಲ್ದಾರ್ ಮೋಹನ ಕುಮಾರಿ, ನಗರಸಭೆ ಪೌರಾಯುಕ್ತ ಶಿವಶಂಕರ್, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮುನಿರಾಜು ಸೇರಿದಂತೆ ಲೋಕೋಪಯೋಗಿ, ನಗರಸಭೆ, ಸಣ್ಣ ನೀರಾವರಿ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇದ್ದರು.