ಬೆಂಗಳೂರು: ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಿಗೆ ಕಾರ್ಪೊರೇಟ್ ಮತ್ತು ಕಾರ್ಖಾನೆ ನಿಯಮ ಅಳವಡಿಸಿದ್ದರೂ ಸಂಸ್ಥೆಯ ಸಿಬ್ಬಂದಿ ಪರೋಕ್ಷವಾಗಿ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮದಂತೆಯೇ ಕೆಲಸ ಮಾಡುತ್ತಿದ್ದಾರೆ. ಆದರೆ, ದುರಾದೃಷ್ಟ ಇವರೆಲ್ಲರೂ ಎಲ್ಲ ಸರ್ಕಾರಿ ನೌಕರರಿಗಿಂತಲೂ ಅತ್ಯಂತ ಕಡಿಮೆ ವೇತನ ಪಡೆಯುತ್ತಿದ್ದಾರೆ.
ಆದರೂ ಈ ಅಳಲಿಗೆ ಆಡಳಿತಾರೂಢ ಸರ್ಕಾರಗಳು ಸ್ಪಂದಿಸದೇ ಇರುವುದು ಸಿಬ್ಬಂದಿಯನ್ನು ಮತ್ತಷ್ಟು ಅಸಹಾಯಕತೆಗೆ ಸಿಲುಕಿಸಿದೆ. ಹೌದು! ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರರಿಗೆ 7ನೇ ವೇತನ ಆಯೋಗ ರಚಿಸಿದ್ದು, ಆ ನೌಕರರು ಮತ್ತು ಅವರ ಕುಟುಂಬಗಳಲ್ಲಿ ಸಂಭ್ರಮ ಮನೆಮಾಡಿದೆ. ಆದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಮಾರು 1.20 ಲಕ್ಷ ಸಿಬ್ಬಂದಿಗಳು ಕಳೆದ 3 ವರ್ಷಗಳಿಂದ ಕೇಳುತ್ತಿರುವ ವೇತನ ಆಯೋಗ ಮಾದರಿ ಅಳವಡಿಸಲು ಮಾತ್ರ ಮುಂದಾಗದೇ ಇನ್ನೂ ಮೀನಮೇಷ ಎಣಿಸುತ್ತಿದೆ.
ಇನ್ನು ಅಗತ್ಯ ಸೇವೆಗಳಲ್ಲಿ ಒಂದಾಗಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿ ರಾಜ್ಯ ಸರ್ಕಾರಿ ನೌಕರರಿಗಿಂತ ಕಡಿಮೆಯಿಲ್ಲದಂತೆ ಜೀವದ ಹಂಗು ತೊರೆದು, ತಮ್ಮ ಕುಟುಂಬವನ್ನು ಬಿಟ್ಟು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಸಾರಿಗೆ ಸಂಸ್ಥೆ ಸರ್ಕಾರದ ಅವಿಭಾಜ್ಯ ಅಂಗವಾಗಿದೆ. ಅದಿಲ್ಲದೆ ಸರ್ಕಾರ ಕೈ ಕಾಲು, ತಲೆ ಕೆಲಸವನ್ನೇ ಮಾಡಲು ಸಾಧ್ಯವಿಲ್ಲ. ಆದರೂ ಸಿಬ್ಬಂದಿಯ ವಿಷಯದಲ್ಲಿ ಮಾತ್ರ ದಿವ್ಯಮೌನ.
ಸಾರಿಗೆ ಸಿಬ್ಬಂದಿಯನ್ನು ರಾಜ್ಯ ಸರ್ಕಾರಿ ನೌಕರರನ್ನಾಗಿಸಬೇಕು. ವೇತನ ಅಯೋಗ ಮಾದರಿಯಲ್ಲಿ ವೇತನ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಕ್ಷಾಂತರ ನೌಕರರು ತಮ್ಮ ಕುಟುಂಬ ಸಮೇತ ಬೀದಿಗಿಳಿದು ಹೋರಾಟ ಮಾಡಿದ್ದಾರೆ. 14ದಿನಗಳು ರಾಜ್ಯಾದ್ಯಂತ ಒಂದೂ ಬಸ್ ರಸ್ತೆಗಿಳಿಯದಂತೆ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಆ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದಡಿ ಕೆಲ ಸಿಬ್ಬಂದಿ ತಮ್ಮ ನೌಕರಿಯನ್ನೂ ಕಳೆದುಕೊಂಡಿದ್ದಾರೆ. ( ಸದ್ಯ ಕೋರ್ಟ್‌ನಲ್ಲಿ ಪ್ರಕರಣಗಳಿ ನಡೆಯುತ್ತಿವೆ) ಆದರೂ ಸರ್ಕಾರ, ಸಾರಿಗೆ ಸಿಬ್ಬಂದಿಯ ಹೋರಾಟಕ್ಕೆ ಇನ್ನೂ ಮಣಿದಿಲ್ಲ.
ನೌಕರರ ಮನವಿಗಷ್ಟೇ ಸ್ಪಂದನೆ: ಯಾವುದೇ ಹೋರಾಟ, ಪ್ರತಿಭಟನೆ ಇಲ್ಲದೇ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ 7ನೇ ವೇತನ ಆಯೋಗ ರಚನೆಗೆ ಸಮಿತಿ ನೇಮಕ ಮಾಡಿರುವುದು ಸಾರಿಗೆ ಸಿಬ್ಬಂದಿಯನ್ನು ಮತ್ತಷ್ಟು ಕೆಣಕಿದೆ.
ಸಾರಿಗೆ ನೌಕರರ ವೇತನ ಹೆಚ್ಚಳವನ್ನೂ ಆಯೋಗದಲ್ಲಿ ಸೇರ್ಪಡೆ ಮಾಡುವ ಕುರಿತು ಸರ್ಕಾರ ಮತ್ತು ಸಂಬಂಧಿಸಿದ ಸಾರಿಗೆ ಇಲಾಖೆಯಿಂದ ಇಲ್ಲಿಯವರೆಗೂ ಕನಿಷ್ಠ ಯಾವುದೇ ಸೂಚನೆಯೂ ಸಿಕ್ಕಿಲ್ಲ. ಇದು ಸಾರಿಗೆ ಸಿಬ್ಬಂದಿಯ ಬಗ್ಗೆ ಸರ್ಕಾರ ತೋರುತ್ತಿರುವ ತಾತ್ಸಾರಕ್ಕೆ ಸಾಕ್ಷಿಯಾಗಿದೆ.
ಸಿಹಿ ಕೊಡುತ್ತೇವೆ ಎಂದು ಹೇಳಿಕೊಂಡೆ ಬರುತ್ತಿರುವ ಸಚಿವ: ಕೆಲವು ದಿನಗಳ ಹಿಂದೆಯಷ್ಟೇ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು, ನಿಗಮದ ಸಿಬ್ಬಂದಿಗೆ ಸಿಹಿ ಸುದ್ದಿ ಕೊಡುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ.
ಈ ಹಿಂದೆಯೂ ನೀಡಿದ್ದ ಭರವಸೆಗಳೂ ಈಡೇರಲಿಲ್ಲ. ಕಳೆದ ಕೋವಿಡ್ ವೇಳೆ 8 ತಾಸಿಗಿಂತ ಹೆಚ್ಚು ಸಮಯದವರೆಗೆ ಯಾವುದೇ ಓಟಿ (ಅವಧಿ ಮೀರಿದ ಭತ್ಯೆ) ಪಡೆಯದೇ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಿಗೆ ಸುಗಮ ಸಂಚಾರ, ಸಾರಿಗೆ ಸೇವೆ ನೀಡಿದ್ದನ್ನೂ ಸರ್ಕಾರ ಮರೆತಿದೆ ಎಂಬ ಬೇಸರ ಸಿಬ್ಬಂದಿಯನ್ನು ಕಾಡುತ್ತಿದೆ.
ಕೋವಿಡ್ ನೆಪದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನೀಡುತ್ತಿದ್ದ ಅಗ್ರಿಮೆಂಟ್‌ಗೂ ಸಂಚಕಾರ ಬಂದಿದೆ. ಕಳೆದ 2020ಕ್ಕೆ ನೀಡಬೇಕಿದ್ದ ಅಗ್ರಿಮೆಂಟ್ ಈವರೆಗೂ ನಿಗದಿಯಾಗಿಲ್ಲ. ನೌಕರರ ಕೆಲವು ಸಂಘಟನೆಗಳು ಅಗ್ರಿಮೆಂಟ್‌ಗಿಂತ ವೇತನ ಆಯೋಗ ಮಾದರಿಯಡಿ ವೇತನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾವೆ. ಅತ್ತ ವೇತನ ಯೋಗವೂ ಇಲ್ಲ, ಇತ್ತ ಅಗ್ರಿಮೆಂಟೂ ಇಲ್ಲದೆ ಸಿಬ್ಬಂದಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.