ಬೆಂಗಳೂರು: ಹಿರಿಯ ನಾಗರಿಕರಿಗೆ ಪಿಂಚಣಿ ಹಾಗೂ ಅಂಗವಿಕಲರಿಗೆ ಮಾಸಾಶಾನ ನೀಡಲೂ ಸಾಧ್ಯವಾಗದಷ್ಟು ರಾಜ್ಯ ಬಿಜೆಪಿ ಸರ್ಕಾರ ದಿವಾಳಿಯಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿಯವರು ತಾವು ಹೋದ ಕಡೆಯೆಲ್ಲ ಯೋಜನೆಗಳಿಗೆ ಕೇವಲ ಶಂಕುಸ್ಥಾಪನೆ ಮಾಡುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಕಳೆದ ನಾಲ್ಕು ತಿಂಗಳಿನಿಂದ ಹಿರಿಯ ನಾಗರಿಕರಿಗೆ ಪಿಂಚಣಿ ನೀಡಿಲ್ಲ. ಅಂಗವಿಕಲರಿಗೆ ಮಾಸಾಶನವನ್ನೂ ಸರ್ಕಾರ ನೀಡುತ್ತಿಲ್ಲ. ಅಂಗವಿಕಲರಿಗೆ 2,000 ರೂಪಾಯಿ ಮಾಸಾಶನ ನೀಡುವ ಸರ್ಕಾರದ ಭರವಸೆಯು ಕೇವಲ ಘೋಷಣೆಯಾಗಿ ಉಳಿದಿದೆಯೇ ಹೊರತು ಜಾರಿಗೆ ಬರುತ್ತಿಲ್ಲ ಎಂದು ಕಿಡಿಕಾರಿದರು.
ಇನ್ನು ಬಿಜೆಪಿ ಶಾಸಕರು ಹಾಗೂ ಸಚಿವರ ಭ್ರಷ್ಟಾಚಾರದಿಂದಾಗಿ ಸರ್ಕಾರದ ಬೊಕ್ಕಸ ಬರಿದಾಗಿದೆ. ಆದ್ದರಿಂದಲೇ ಸಿಎಂ ಬಸವರಾಜ ಬೊಮ್ಮಾಯಿಯವರು ಯೋಜನೆಗಳನ್ನು ಜಾರಿಗೆ ತರುವ ಬದಲು ಕೇವಲ ಘೋಷಣೆ ಹಾಗೂ ಶಂಕುಸ್ಥಾಪನೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವುದರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಮುಂತಾದವರು ಬೀದಿಗಿಳಿದು ಪ್ರತಿಭಟಿಸಿದರೆ ಮಾತ್ರ ಅವರಿಗೆ ಸಂಬಳ ಸಿಗುತ್ತದೆ. ಇಲ್ಲದಿದ್ದರೆ ಐದಾರು ತಿಂಗಳ ವೇತನ ಬಾಕಿಯಿದ್ದರೂ ಸರ್ಕಾರ ಈ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ.
ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಕೂಡ ಅನುದಾನ ಬಿಡುಗಡೆ ಮಾಡದೇ, ಅವರ ಜೀವನದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿರುವುದು ಖಂಡನೀಯ. ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ತನಕ ರಾಜ್ಯದ ಹಾಗೂ ಜನಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಎಂದು ಬಿ.ಟಿ.ನಾಗಣ್ಣ ಹೇಳಿದರು.