ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಆಹೋ ರಾತ್ರಿ ಧರಣಿ ನಡೆಯುತ್ತಿರುವುದು ಶನಿವಾರ 12ನೇ ದಿನ ಪೂರೈಸಿದೆ, ಈ ನಡುವೆ ಧರಣಿ ನಿರತರ ರೈತ ಮುಖಂಡರನ್ನು ಮುಖ್ಯಮಂತ್ರಿ ಬೇಟಿಗೆ ಕರೆದೊಯ್ಯುವ ಭರವಸೆ ನೀಡಿ ಹುಸಿಗೊಳಿಸಿದ್ದಾರೆ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ಕಬ್ಬು ಎಫ್ ಆರ್ ಪಿ ದರದಲ್ಲಿ ರೈತರಿಗೆ ಮೋಸ, ರಾಜ್ಯ ಸಲಹಾ ಬೆಲೆ ನಿಗದಿ ಮಾಡಿ ಕಬ್ಬಿನಿಂದ ಬರುವ ಇತರೆ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ,ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಲಗಾಣಿ ಸುಲಿಗೆ ತಪ್ಪಿಸಿ, ಕಬ್ಬಿನ ತೂಕದಲ್ಲಿ ಮೋಸ, ಸಕ್ಕರೆ ಇಳುವರಿಯಲ್ಲಿ ಮೋಸ ತಪ್ಪಿಸಿ ಎಂದು ಕಳೆದ 12 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರಾಜ್ಯ ಕಬ್ಬು ಬೆಳೆಗಾರರ ಪದಾಧಿಕಾರಿಗಳು, ಪೊಲೀಸರ ಮಧ್ಯಸ್ಥಿಕೆಯಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸ ಒಪ್ಪಿದರು ಆದರೆ ಭೇಟಿ ಮಾಡಿಸುತ್ತೇವೆ ಎಂದು ಹೇಳಿಹೋದ ಎಸಿಪಿ ಒಬ್ಬರು ಇತ್ತ ತಲೆಯನ್ನೇ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವೇ ಮುಖ್ಯಮಂತ್ರಿ ಮನೆಗೆ ಹೋಗುತ್ತೇವೆ ಎಂದು ಹೋಗಲು ಮುಂದಾದರೆ ನಮ್ಮನ್ನು ಪೊಲೀಸರು ಬಿಡುತ್ತಿಲ್ಲ. ಇತ್ತ ಬಂಧಿಸಿ ನ್ಯಾಯಾಲಯಕ್ಕೂ ಕರೆದೊಯುತ್ತಿಲ್ಲ, ಇದು ಗೂಂಡಾಗಿರಿ ವರ್ತನೆ, ಎನ್ನುತ್ತಾ ಆಕ್ರೋಶಗೊಂಡರು. ನಿನ್ನೆ ರೈತ ಮುಖಂಡರನ್ನು ಬಂಧಿಸಿ ರಾತ್ರಿ 11 ಗಂಟೆಯಲ್ಲಿ ಬಿಡುಗಡೆ ಗೊಳಿಸಿದ ಪೊಲೀಸರು ರೈತರನ್ನು ಸಮಾಧಾನ ಪಡಿಸಿ ಮುಖ್ಯಮಂತ್ರಿ ಜತೆ ಚರ್ಚೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದರು.
ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದ ರೈತರ ಸೋಲಿಗೆ ಆಗುತ್ತಿದೆ, ಮಂತ್ರಿಗಳು ಸುಳ್ಳು ಹೇಳಿಕೊಂಡು ರಾಜಭಾರ ಮಾಡುತ್ತಿದ್ದಾರೆ, ಸಕ್ಕರೆ ಸಚಿವರು ಪಾಪದ ಕೂಸಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ವಿಫಲವಾಗುತ್ತಿರುವ ಕಾರಣ, ಆಡಳಿತ ಪಕ್ಷದ ಬಿಜೆಪಿ ಶಾಸಕರ ಸಂಸದರ ಮನೆ ಮುಂದೆ ಐದರಂದು ರೈತರು ಪ್ರತಿಭಟನೆ ನಡೆಸಿ ಎಚ್ಚರಿಸಲಿದ್ದೇವೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಇನ್ನು ಡಿ.6ರಿಂದ ಧರಣಿ ನಿರತ ಸ್ಥಳದಲ್ಲಿ ಕೆಲವು ರೈತರು ಸರದಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದ ಅವರು, ಕಬ್ಬು ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ನಾಲ್ಕಾರು ಸಭೆಗಳನ್ನು ನಡೆಸಿ, ತಜ್ಞರ ಸಮಿತಿ ರಚಿಸಿ ಐದು ದಿನದಲ್ಲಿ ವರದಿ ಏನು ಮಾಡಿದ್ದಾರೆ, ರೈತರಿಗೆ ಬಹಿರಂಗಪಡಿಸಲಿ. ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದರು ಸರ್ಕಾರ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದೆ, ಪೊಲೀಸರ ಬಲದಿಂದ ಭಂಡತನ ತೂರುತಿದೆ ಎಂದು ಕಿಡಿಕಾರಿದರು.
ವೀರನಗೌಡ ಪಾಟೀಲ್, ಕುಮಾರ್ ಬುಬಾಟಿ, ರಮೇಶ್ ಹೂಗಾರ್ ಅತ್ತಹಳ್ಳಿ ದೇವರಾಜ್, ಹುಳುವಪ್ಪ ಬಳಗೆರಾ, ಬಸವನಗೌಡರು, ಮಂಜುಳಾಪಾಟೀಲ್ ಮುಂತಾದವರು ಇದ್ದರು.