ಕೆಕೆಆರ್‌ಟಿಸಿ: ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ- ಆದರೂ ಪೊಲೀಸ್ ದೂರು ದಾಖಲಿಸದಂತೆ ಡಿಎಂನಿಂದಲೇ ಬೆದರಿಕೆ
ಹುನುಗುಂದ: ಹುನುಗುಂದದಿಂದ ಲಿಂಗಸುಗೂರಿಗೆ ಹೋಗುತ್ತಿದ್ದ (ಮಾರ್ಗ ಸಂಖ್ಯೆ 92/94 ವಾಹನ ಸಂಖ್ಯೆKA 36 F 1140 ವಾಹನ) ಸಾರಿಗೆ ಬಸ್ ಚಾಲಕ ನಮಗೆ ಓವರ್‌ಟೇಕ್ ಮಾಡಲು ಬಿಡಲಿಲ್ಲ ಎಂದು 10 ಜನರಿದ್ದ ಪುಂಡರ ಗುಂಪು ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಪರಿಣಾಮ ಚಾಲಕನ ಸ್ಥಿತಿ ಗಂಭೀರವಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಲಿಂಗಸುಗೂರು ಘಟಕದ ಚಾಲಕ ಹುಲುಗಪ್ಪ ಎಂಬುವರೇ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು.
ಶನಿವಾರ (ಡಿ.3) ಬೆಳಗ್ಗೆ 9:30 ರ ಸುಮಾರಿಗೆ ಈ ಘಟನೆ ನಡೆದಿದೆ. ಈಚೂರು ಗ್ರಾಮದ ಬಳಿ ವಾಹನಕ್ಕೆ ಸೈಡು ಕೊಡಲಿಲ್ಲ ಎಂದು 10 ಜನ ಪುಂಡರು ಬಂದು ಚಾಲಕ ಹುಲುಗಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಪರಿಣಾಮ ಚಾಲಕರ ಎಡಗೈನ ಎರಡು ಬೆರಳುಗಳು ಮುರಿದಿವೆ.
ಆದರೆ, ತಮ್ಮ ಸಾರಿಗೆ ಚಾಲಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕಿದ್ದ ಘಟಕ ವ್ಯವಸ್ಥಾಪಕರು ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಘಟನೆ ನಡೆದ ಬಗ್ಗೆ ವಿಚಾರ ತಿಳಿದ ಲಿಂಗಸುಗೂರು ಘಟಕ ವ್ಯವಸ್ಥಾಪಕ ಅಡ್ಡೆಪ್ಪ ಕುಂಬಾರ್ ಅವರು ಬೆಳಗ್ಗೆ 10:30ರ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ನೀವು ಪೊಲೀಸ್ ಕೇಸ್ ನಂತಹ ಯಾವುದೇ ವಿಚಾರಕ್ಕೆ ಕೈ ಹಾಕಬೇಡಿ, ಏಕೆಂದರೆ ಇದು ನನ್ನ ಊರು ಜತೆಗೆ ನನಗೆ ರಾಜಕೀಯ ಒತ್ತಡಗಳು ಬಹಳಷ್ಟು ಬರುತ್ತಿವೆ. ಹೀಗಾಗಿ ನಿಮ್ಮ ಉಪಚಾರದ ಖರ್ಚು ವೆಚ್ಚಗಳನ್ನು ಅವರಿಂದ ಭರಿಸುವುದಕ್ಕೆ ವ್ಯವಸ್ಥೆ ಮಾಡುತ್ತೇನೆಂದು ಹೇಳಿ ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಹಲ್ಲೆಗೊಳಗಾದ ಚಾಲಕ ಗಂಭೀರ ಸ್ಥಿತಿಯಲ್ಲಿದ್ದು ಅವನಿಗೆ ನೀನೇನಾದರೂ ಪೊಲೀಸ್ ಪ್ರಕರಣ ದಾಖಲಿಸಿದರೆ ನಿನ್ನನ್ನು ಅಮಾನತು ಮಾಡೋದಲ್ಲದೆ ನೀನು ಈ ಭಾಗದಲ್ಲಿ ಓಡಾಡುವುದಕ್ಕೆ ಆಗುವುದಿಲ್ಲ. ಅವರು ಪುಂಡಪೋಕರಿಗಳು. ನಿನ್ನನ್ನು ಕೊಲ್ಲುತ್ತಾರೆ ಎಂದು ಘಟಕ ವ್ಯವಸ್ಥಾಪಕರೆ ಭಯಹುಟ್ಟಿಸುತ್ತಿದ್ದಾರೆ ಎಂಬ ಗಂಭೀರ ಆರೋಪವು ಕೇಳಿ ಬರುತ್ತಿದೆ.
ಸದ್ಯ ಚಾಲಕ ಲಿಂಗಸುಗೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೂಡಲೇ ಕೆರೋಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಎಂದು ತಿಳಿಸಿದ್ದಾರೆ.
ಇನ್ನು ಘಟನೆ ಸಂಬಂಧ ಲಿಂಗಸುಗೂರು ಘಟಕ ವ್ಯವಸ್ಥಾಪಕರನ್ನು ವಿಜಯಪಥ ಫೋನ್ ಮೂಲಕ ಮಾತನಾಡಿಸಿದಾಗ, ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿರುವ ಬಗ್ಗೆ ನನಗೇನು ಗೊತ್ತಿಲ್ಲ. ಎಸಿಪಿ ದೂರು ದಾಖಲಿಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು. ಈ ವೇಳೆ ನಿಮ್ಮ ಘಟಕದ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ ಈ ಬಗ್ಗೆ ಘಟಕ ವ್ಯವಸ್ಥಾಪಕರಾದ ನೀವೇ ಖುದ್ದು ನಿಂತು ಪೊಲೀಸರಿಗೆ ದೂರು ನೀಡಬೇಕಲ್ಲವೇ ಎಂದು ಕೇಳಿದ್ದಕ್ಕೆ.
ಇಲ್ಲ ಹಲ್ಲೆಗೊಳಗಾದ ಸ್ಥಳದಲ್ಲಿ ನಾವು ಇಲ್ಲದಿದ್ದರಿಂದ ಅದಕ್ಕೆ ಸಂಬಂಧಪಟ್ಟಂತೆ ಚಾಲಕನೆ ದೂರು ನೀಡಬೇಕು ನಾವು ದೂರು ನೀಡಲು ಬರುವುದಿಲ್ಲ ಎಂದು ವಿಜಯಪಥಕ್ಕೆ ತಿಳಿಸಿದರು. ಆದರೆ, ವಾಸ್ತವದಲ್ಲಿ ಯಾವುದೇ ಸಾರಿಗೆ ನೌಕರರ ಮೇಲೆ ಹಲ್ಲೆಯಾದರೆ ಘಟಕ ವ್ಯವಸ್ಥಾಪಕರೇ ಖುದ್ದು ನಮ್ಮ ನೌಕರರ ಮೇಲೆ ಈ ರೀತಿ ಹಲ್ಲೆಯಾಗಿದೆ ಎಂದು ಪೊಲೀಸ್ ದೂರು ದಾಖಲಿಸಬೇಕು. ಆದರೆ, ಇಲ್ಲಿ ಡಿಪೋ ವ್ಯವಸ್ಥಾಪಕರೇ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಈ ಬಗ್ಗೆ ಮೇಲಧಿಕಾರಿಗಳು ಕೂಡಲೇ ಕ್ರಮಕೈಗೊಂಡು ಹಲ್ಲೆಗೊಳಗಾದ ಚಾಲಕನಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಜತೆಗೆ ಹಲ್ಲೆಕೋರರಿಗೆ ತಕ್ಕ ಶಿಕ್ಷೆಯಾಗುವ ನಿಟ್ಟಿನಲ್ಲಿ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.