ನಿಂತಿದ್ದ ಕಂಟೇನರ್‌ಗೆ ಕಾರು ಡಿಕ್ಕಿ : ಪೊಲೀಸ್ ಅಧಿಕಾರಿ ರವಿ, ಪತ್ನಿ ಸಾವು
ವಿಜಯಪುರ: ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಜಿಲ್ಲೆಯ ಸಿಂದಗಿ ತಾಲೂಕಿನ ಸಿಪಿಐ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.
ಬುಧವಾರ ಮಧ್ಯಾಹ್ನ ನೆಲೋಗಿ ಕ್ರಾಸ್ ಬಳಿ ನಿಂತಿದ್ದ, ಕಂಟೇನರ್‌ಗೆ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಿಪಿಐ ರವಿ ಉಕ್ಕುಂದ (43), ಪತ್ನಿ ಮಧು (40) ಅಸುನೀಗಿದ್ದಾರೆ.
ಸಿಂದಗಿಯಿಂದ ಕಲಬುರಗಿಗೆ ಬುಧವಾರ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ತೆರಳುತ್ತಿರುವಾಗ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್‌ನಲ್ಲಿ ರಸ್ತೆ ಬದಿ ನಿಂತಿದ್ದ ಕಂಟೈನರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಇಬ್ಬರೂ ಸಾವಿಗೀಡಾಗಿದ್ದಾರೆ.
ಸಿಪಿಐ ರವಿ ಉಕ್ಕುಂದ ಮತ್ತು ಪತ್ನಿ ಚಲಾಯಿಸುತ್ತಿದ್ದ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ರವಿ ಅವರು ಮೂಲತಃ ಕೊಪ್ಪಳ ಜಿಲ್ಲೆಯವರು. ರವಿ ಉಕ್ಕುಂದ ಅವರು ವಿಜಯಪುರ ಜಿಲ್ಲೆ ಸಿಂಧಗಿ ಠಾಣೆಯಲ್ಲಿ ಸಿಪಿಐ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಲಬುರಗಿಯ ಆಸ್ಪತ್ರೆಗೆಂದು ಸಿಂಧಗಿಯಿಂದ ಪತ್ನಿ ಜತೆಗೆ ರವಿ ಉಕ್ಕುಂದ ಅವರು ಸ್ವಂತ ಕಾರಿನಲ್ಲಿ ತೆರಳುವಾಗ ಮಾರ್ಗಮಧ್ಯೆ ಅಪಘಾತ ಸಂಭವಿಸಿದೆ.
ರವಿ ಉಕ್ಕುಂದ ಅವರೇ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ರಸ್ತೆ ಕ್ರಾಸ್ ಮಾಡುವಾಗ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದ್ದು, ಸ್ಥಳದಲ್ಲೇ ದಂಪತಿ ದುರಂತ ಅಂತ್ಯ ಕಂಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು, ನೆಲೋಗಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.