ಬೆಂಗಳೂರು: ಒಂದು ಕಡೆ ಒಗ್ಗಟ್ಟಿನ ಮಂತ್ರ ಜಪಿಸುವ ಸಾರಿಗೆ ನೌಕರರ ಪರ ಸಂಘಟನೆಗಳು ಇತ್ತ ತಮ್ಮ ತಮ್ಮ ಧೋರಣೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದರಿಂದ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳು ಇನ್ನೂ ಮರೀಚಿಕೆಯಾಗಿಯೇ ಉಳಿದಿವೆ.
ಇನ್ನು ನಿಗಮದ ಅಧಿಕಾರಿಗಳು ತಮಗೂ ನಷ್ಟವಾಗುತ್ತಿದ್ದರೂ ನೌಕರರು ಹೋರಾಟ ಮಾಡೇ ಮಾಡುತ್ತಾರೆ, ಆ ಬಳಿಕ ಸರ್ಕಾರ ನಮಗೂ ವೇತನ ಹೆಚ್ಚಳ ಮಾಡಲೇ ಬೇಕು ಎಂದು ಅವರೂ ಕೂಡ ಆರ್ಥಿಕ ನಷ್ಟ ಅನುಭವಿಸುತ್ತಿದ್ದರೂ ಏನನ್ನು ಮಾತನಾಡದೆ ಮೌನ ತಾಳಿಸಿದ್ದಾರೆ. ಇದು ಸರ್ಕಾರಕ್ಕೆ ಒಂದು ರೀತಿ ವರವಾಗಿದೆ.
ಒಟ್ಟಾರೆ ಬೇಡಿಕೆ ಈಡೇರಿಕೆಗೆ ಸಾರಿಗೆ ನಿಗಮಗಳ ನೌಕರರಷೇ ಹೋರಾಟ ನಡೆಸುತ್ತಿದ್ದು, ಅಧಿಕಾರಿಗಳು ಮೌನವಾಗಿರುವುದು ಒಂದು ಕಡೆಯಾದರೆ, ಇನ್ನು ಕೆಲ ಅಧಿಕಾರಿಗಳು ನಮಗೆ ಏನೋ ಮಾಡಿ ಬಿಡುತ್ತವೆ ಎಂದು ಕೆಲ ಸಂಘಟನೆಗಳ ಪರ ಬ್ಯಾಟ್ ಬೀಸುತ್ತಿದ್ದಾರೆ. ಇದರಿಂದ ಜನವರಿ 01- 2020ರಲ್ಲೇ ಆಗಬೇಕಿದ್ದ ವೇತನ ಹೆಚ್ಚಳ ಈವರೆಗೂ ಆಗಿಲ್ಲ. ಇದಕ್ಕೆ ಪರೋಕ್ಷವಾಗಿ ಅಧಿಕಾರಿಗಳು ಕಾರಣರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಒಟ್ಟಿಗೆ ನಿಗಮಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹೋರಾಟಕ್ಕೆ ಇಳಿದಿದ್ದರೆ ಈ ರೀತಿಯ ಸಮಸ್ಯೆಯೇ ಆಗುತ್ತಿರಲಿಲ್ಲ. ಆದರೆ ಅಧಿಕಾರಿಗಳು ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನೌಕರರ ಹೋರಾಟದ ಫಲವನ್ನು ಪಡೆಯಲು ಮೌನವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಇದು ಸತ್ಯಕೂಡ ಹೌದು. ಕಾರಣ ನೌಕರರ ಹೋರಾಟದಿಂದ ಸರ್ಕಾರ ವೇತನ ಹೆಚ್ಚಳ ಘೋಷಣೆ ಮಾಡಿದರೆ ಅದು ನಿಗಮದ ಸಮಸ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಸಿಗುತ್ತದಲ್ಲವೇ.
ಹೀಗಿದ್ದರೂ ಕೂಡ ಅಧಿಕಾರಿಗಳು ಹೋರಾಟ ಮಾಡುವ ನೌಕರರನ್ನು ವಜಾ, ಅಮಾನತು, ವರ್ಗಾವಣೆಯಂತಹ ಕ್ರಮ ತೆಗೆದುಕೊಂಡು ಅವರನ್ನು ಬಲಿ ಪಶು ಮಾಡಿ ತಾವು ಅವರ ಹೋರಾಟದ ಫಲವನ್ನು ಪಡೆದುಕೊಂಡು ಸರ್ಕಾರಕ್ಕೆ ಮತ್ತು ಆಡಳಿತ ಮಂಡಳಿಗೆ ಒಳ್ಳೆಯವರಾಗೇ ಉಳಿದು ಬಿಟ್ಟಿದ್ದಾರೆ.
ಇತ್ತ ಹೋರಾಟ ಮಾಡಿ ಕೆಲಸವನ್ನು ಕಳೆದುಕೊಂಡು ಅತ್ತ ಕಾನೂನು ಹೋರಾಟ ಮಾಡುವುದಕ್ಕೆ ಆರ್ಥಿಕ ಬಲವಿಲ್ಲದೇ ನೌಕರರು ಸಂಸ್ಥೆಯಿಂದ ಹೊರಬಿದ್ದು ನರಳುತ್ತಾರೆ, ಇಂಥ ಪರಿಸ್ಥಿತಿ ಬರಬಾರದು ಎಂದರೆ ನೌಕರರ ಜತೆ ಅಧಿಕಾರಿಗಳು ಕೈ ಜೋಡಿಸಿ ವೇತನ ವಿಷಯವಾಗಿ ಹೋರಾಟ ಮಾಡಬೇಕಿದೆ. ಇದರಿಂದ ಅಧಿಕಾರಿಗಳು ಕಳೆದು ಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಹೆಚ್ಚಾಗಿದೆಯಲ್ಲವೇ.
ಇನ್ನಾದರೂ ತಮ್ಮ ಧೋರಣೆಗಳನ್ನು ಅಧಿಕಾರಿಗಳು ಬದಲಿಸಿಕೊಂಡು ನಮ್ಮ ಪರವಾಗಿಯೂ ನೌಕರರ ಹೋರಾಟ ಮಾಡುತ್ತಿದ್ದಾರೆ ಎಂಬುದನ್ನು ಅರಿತು ನೌಕರರ ನ್ಯಾಯಯುತ ಹೋರಾಟಕ್ಕೆ ಸಾಥ್ ನೀಡಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹ ಪೂರ್ವಕ ಒತ್ತಾಯ ಮಾಡಿದ್ದಾರೆ.