ಬೆಂಗಳೂರು: ಕಳೆದ 2021ರ ಏಪ್ರಿಲ್ 7 ರಿಂದ 21ರವರೆಗೆ ವೇತನ ಸೇರಿದಂತೆ ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಕೈಗೊಂಡ ಮುಷ್ಕರದ ವೇಳೆ ಸೇವೆಯಿಂದ ವಜಾಗೊಂಡಿರುವ ನೌಕರರ ಮರು ನೇಮಕಕ್ಕೆ ಇಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ವಜಾಗೊಂಡ ಎಲ್ಲ ನೌಕರರನ್ನು ಮರು ನೇಮಕ ಮಾಡಿಕೊಳ್ಳುವುದಕ್ಕೆ ಬಹುತೇಕ ಸಮ್ಮತಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಬೆಳಗ್ಗೆಯಿಂದ ಸಂಜೆ 5 ಗಂಟೆಯವರೆಗೆ ಮೂರು ಸುತ್ತಿನ ಸಭೆ ನಡೆಯಿತು. ಈ ಸಭೆಗಳು ವಜಾಗೊಂಡ ನೌಕರರ ಸಮ್ಮುಖದಲ್ಲೇ ನಡೆದಿದ್ದು ಅವರು ಸಭೆಯಲ್ಲಿ ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಇಟ್ಟರು. ಈ ವೇಳೆ ನಿಗಮದ ಅಧಿಕಾರಿಗಳು ಮತ್ತು ಅಧ್ಯಕ್ಷ, ಉಪಾಧ್ಯಕ್ಷರು ಬಹುತೇಕ ನೌಕರರ ಬೇಡಿಕೆಗಳಿಗೆ ಸ್ಪಂದಿಸಿದರು.
ಬಳಿಕ ನಡೆದ ಕೊನೆಯ ಸುತ್ತಿನ ಸಭೆಯಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಅವರು ಭಾಗವಹಿಸಬೇಕಿತ್ತು. ಆದರೆ ಸಂಸ್ಥೆಯ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದರಿಂದ ಈ ಕೊನೆಯ ಸಭೆಗೆ ಬರಲು ಸಾಧಯವಾಗಲಿಲ್ಲ. ಹೀಗಾಗಿ ಮತ್ತೆ ಸಭೆಯನ್ನು ಬರುವ ಗುರುವಾರ (ಡಿ.22) ನಡೆಸಿ ಆ ಸಭೆಯಲ್ಲಿ ಬಹುತೇಕ ವಜಾಗೊಂಡಿರುವ ಎಲ್ಲ ನೌಕರರನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಆದೇಶ ಹೊರಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ನೌಕರರು ಕೂಡ ಈಗಾಗಲೇ ಕೋರ್ಟ್ನಲ್ಲಿ ಪ್ರಕರಣಗಳಿದ್ದು ಬಹುತೇಕ ಎಲ್ಲ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು. ಜತೆಗೆ ಸೇವಾ ನಿರಂತರತೆ (Service Continuity) ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಇದಿಷ್ಟೇ ಅಲ್ಲದೆ ಯಾವುದೇ ಷರತ್ತುಗಳನ್ನು ವಿಧಿಸದೆ ಎಲ್ಲ ವಜಾಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಈ ಎಲ್ಲವನ್ನು ಸಭೆಯಲ್ಲಿ ಚರ್ಚಿಸಿದ ಬಳಿಕ ಪ್ರಸ್ತುತ ಕಾನೂನಿನಡಿ ಏನು ಕ್ರಮ ಜರುಗಿಸಲಾಗಿದೆ ಮತ್ತು ಈಗಾಗಲೇ ನೌಕರರ ಪರ ಕಾರ್ಮಿಕ ನ್ಯಾಯಾಲಯದಲ್ಲಿ ಬಂದಿರುವ ತೀರ್ಪು ಮತ್ತು ಹೈ ಕೋರ್ಟ್ನಲ್ಲಿ ಅದನ್ನು ಎತ್ತಿ ಹಿಡಿರುವ ಬಗ್ಗೆಯೂ ನಿಗಮದ ಕಾನೂನು ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಇನ್ನು ಮೂರು ದಿನಗಳ ಸಮಯ ಸಿಗಲಿದೆ.
ಆ ಬಳಿಕ ನಿಗಮದ ಎಂಡಿ ಅವರು ಕೂಲಂಕಶವಾಗಿ ಪರಿಶೀಲನೆ ನಡೆಸಿ ನಿಮಗದಲ್ಲಿ ನೌಕರರಿಗೆ ಆಗಿರುವ ಅನ್ಯಾಯದ ಬಗ್ಗೆ ಕೋರ್ಟ್ ಯಾವ ರೀತಿ ತೀರ್ಪು ನೀಡಲಿದೆ. ಅದರಿಂದ ನಿಗಮ ಮುಖಭಂಗಕ್ಕೆ ಒಳಗಾಗುವುದೆ ಇಲ್ಲ ನೌಕರರ ವಿರುದ್ಧ ತೀರ್ಪು ಬರುವುದೆ ಎಂಬ ಬಗ್ಗೆ ವಿಸ್ತೃತವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಈಗಾಗಲೇ ವಜಾಗೊಂಡ ನೌಕರರ ಪರವಾಗಿಯೇ ಕಾರ್ಮಿಕ ನ್ಯಾಯಾಲಯದಲ್ಲಿ ಮತ್ತು ಹೈ ಕೋರ್ಟ್ನಲ್ಲಿ ಮಧ್ಯಂತರ ಆದೇಶಗಳು ಹೊರಬಿದ್ದಿದ್ದು ಅಂತಿಮ ತೀರ್ಪುಕೂಡ ನೌಕರರ ಪರವಾಗಿಯೇ ಬರುವುದು ಬಹುತೇಕ ಖಚಿತವಾಗಿದೆ. ಆ ಬಳಿಕ ನಿಗಮದ ಕಾನೂನು ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು ಆದರೆ ಅಲ್ಲಿಯೂ ಕೂಡ ಬಹುತೇಕ ಕೆಳಹಂತದ ನ್ಯಾಯಾಲಯದಲ್ಲಿ ಮತ್ತು ಹೈ ಕೋರ್ಟ್ನಲ್ಲಿ ಬಂದಿರುವ ತೀರ್ಪಿನ ಆಧಾರದ ಮೇಲೆಯೇ ಆದೇಶ ಹೊರಬೀಳಬಹುದು.
ಹೀಗಾಗಿ ಅಲ್ಲಿಯೂ ಕೂಡ ನಿಗಮದ ಹೋರಾಟಕ್ಕೆ ನ್ಯಾಯಾಲಯದಲ್ಲಿ ಸೋಲಾಗಬಹುದು. ಈ ಎಲ್ಲವು ನಡೆಯುವುದಕ್ಕೆ ಕೆಲವು ವರ್ಷಗಳನ್ನೇ ತೆಗೆದುಕೊಳ್ಳ ಬಹುದು ಆದರೆ ಕಾನೂನು ಹೋರಾಟದಲ್ಲಿ ನೌಕರರಿಗೆ ಜಯ ಸಿಕ್ಕರೆ ಆ ನೌಕರರನ್ನು ವಜಾ ಮಾಡಿದ ದಿನದಿಂದ ಅವರನ್ನು ಮರು ಸೇವೆಗೆ ನಿಯೋಜನೆ ಮಾಡುವ ವರೆಗೂ ಎಲ್ಲ ಹಿಂಬಾಕಿಯನ್ನು ಕೊಡಬೇಕಾಗಿ ಬರುತ್ತದೆ. ಹೀಗಾಗಿ ಸಂಸ್ಥೆ ಒಂದು ರೀತಿ ಎಲ್ಲ ನೌಕರರಿಗೂ ಕೂರಿಸಿ ವೇತನ ಕೊಟ್ಟಂತಾಗುತ್ತದೆ.
ಹೀಗಾಗಿ ಎಲ್ಲ ಡಾಮೇಜ್ಗಳನ್ನು ತಡೆಯುವ ಸಲುವಾಗಿಯೇ ಸರ್ಕಾರ ಮತ್ತು ನಿಗಮದ ಆಡಳಿತ ಮಂಡಳಿ ಎಲ್ಲ ವಜಾಗೊಂಡಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳುವುದಕ್ಕೆ ಮುಂದಾಗುತ್ತಿದೆ. ಜತೆಗೆ ನಿಮದ ಎಂಡಿ ಅವರು ಕೂಡ ನೌಕರರ ಪರವಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದಕ್ಕೆ ಅವರು ಮುಂದಿನ ಗುರುವಾರ ಎಲ್ಲ ವಜಾಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳುವುದು ಬಹುತೇ ಖಚಿತ ಎಂದೇ ಹೇಳಲಾಗುತ್ತಿದೆ.