ನ್ಯೂಡೆಲ್ಲಿ: ಒಪ್ಪಿದ ಸಂಭೋಗದ ವಯಸ್ಸನ್ನು ಇಳಿಸುವ ಬಗ್ಗೆ ಯಾವುದೇ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.
ಒಪ್ಪಿತ ಲೈಂಗಿಕತೆಯ ವಯಸ್ಸನ್ನು 18 ರಿಂದ 16 ವರ್ಷಕ್ಕೆ ಇಳಿಸುವ ಕುರಿತು ರಾಜ್ಯಸಭೆಯಲ್ಲಿ ಸಿಪಿಐ ಸಂಸದ ಬಿನೋಯ್ ವಿಶ್ವಂ ಕೇಳಿದ ಪ್ರಶ್ನೆಗೆ ಸಚಿವೆ ಸ್ಮೃತಿ ಇರಾನಿ ಲಿಖಿತ ಉತ್ತರ ನೀಡಿದ್ದು, ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಪೋಸ್ಕೋ ಕಾಯಿದೆ 2012 ಅಡಿಯಲ್ಲಿ ವಯಸ್ಸು ನಿಗದಿಪಡಿಸಲಾಗಿದೆ. ಹೀಗಾಗಿ ಮತ್ತೆ ಈ ಬಗ್ಗೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಇನ್ನು ವಿಶೇಷ ನ್ಯಾಯಾಲಯದ ಮುಂದೆ ಯಾವುದೇ ವಿಚಾರಣೆಯ ಇಂತಹ ಪ್ರಶ್ನೆ ಉದ್ಭವಿಸಿದರೆ, ಆ ಪ್ರಶ್ನೆಯನ್ನು ನ್ಯಾಯಾಲಯವು ನಿರ್ಧರಿಸುತ್ತದೆ. ಆದರೆ ಈ ಸಂಬಂಧ ಸರ್ಕಾರದ ನಿಲುವು ದೃಢವಾಗಿದೆ ಎಂದು ತಮ್ಮ ನಿಲುವನ್ನು ಮಂಡಿಸಿದ ಕಾರಣ ಈ ಪ್ರತಿಕ್ರಿಯೆ ಮಹತ್ವ ಪಡೆಕೊಂಡಿದೆ.
ಡಿ.11ರಂದು ಸಿಜೆಐ ಡಿ.ವೈ. ಚಂದ್ರಚೂಡ್ ಅವರು ಪೋಕ್ಸೋ ಕಾಯ್ದೆ ಅನ್ವಯ ಒಪ್ಪಿಗೆಯ ವಯಸ್ಸಿನ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ಸರ್ಕಾರದ ನಿಲುವು ತಿಳಿಸುವಂತೆ ಸೂಚಿಸಿದ್ದರು.
ಅಪ್ರಾಪ್ತ ವಯಸ್ಕರಲ್ಲಿ ವಾಸ್ತವಿಕವಾಗಿ ಸಮ್ಮತಿ ಇದೆಯೇ ಎಂಬುದನ್ನು ಕಾಯ್ದೆ ಪರಿಗಣಿಸುವುದಿಲ್ಲ. 18 ವರ್ಷದೊಳಗಿನ ಮಕ್ಕಳ ಮೇಲೆ ನಡೆಯುವ ಎಲ್ಲ ಲೈಂಗಿಕ ಕ್ರಿಯೆಯನ್ನು ಅಪರಾಧ ಎಂದೇ ಕಾಯ್ದೆ ಹೇಳುತ್ತದೆ.