ಬೆಳಗಾವಿ: ತಿ.ನರಸೀಪುರ ತಾಲೂಕಿನಲ್ಲಿ ಹೆಚ್ಚಾಗಿರುವ ಚಿರತೆ ಹಾವಳಿ ತಪ್ಪಿಸುವಂತೆ ಕ್ಷೇತ್ರದ ಶಾಸಕ ಎಂ.ಅಶ್ವಿನ್ ಕುಮಾರ್ ಅಧಿವೇಶನದಲ್ಲಿ ಮನವಿ ಮಾಡಿದರು.
ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ಮಾತನಾಡಿ ಅವರು, ನಮ್ಮ ಕ್ಷೇತ್ರದಲ್ಲಿ ಚಿರತೆ ದಾಳಿಗೆ ಒಬ್ಬ ಯುವಕ ಓರ್ವ ಯುವತಿ ಜೀವ ಕಳೆದುಕೊಂಡಿದ್ದಾರೆ. ಇದಿಷ್ಟೇ ಅಲ್ಲದೆ ಹತ್ತಾರು ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಂಡಿವೆ ಹೀಗಾಗಿ ನಮ್ಮ ಕ್ಷೇತ್ರದಲ್ಲಿ ಇರುವ ಚಿರತೆಗಳನ್ನು ಸೆರೆಹಿಡಿಯಬೇಕು ಎಂದರು.
ಈ ವೇಳೆ ಹಲವಾರು ಶಾಸಕರು ಧ್ವನಿಗೂಡಿಸಿದರು. ಆರಣ್ಯ ಇಲಾಖೆ ಅಧಿಕಾರಿಗಳು ಒಂದು ಕಡೆ ಚಿರತೆ ಹಿಡಿದು ಮತ್ತೊಂದು ಕಡೆ ಬಿಡುತ್ತಿರುವುದರಿಂದ ನಮಗೆ ಚಿರತೆ ಹಾವಳಿ ಹೆಚ್ಚಾಗಿದೆ ಎಂದು ಮಾಗಡಿ ಶಾಸಕ ಮಂಜುನಾಥ್ ತಿಳಿಸಿದರು.
ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಶಾಸಕ ಅಶ್ವಿನ್ ಕುಮಾರ್ ಎತ್ತಿದ ಪ್ರಶ್ನೆಗೆ ಸದನದಲ್ಲಿ 10 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಯಿತು.
ಗೃಹಸಚಿವ ಆರಗ ಜ್ಞಾನೇಂದ್ರ ಅವರು ಈ ಬಗ್ಗೆ ಸಿಎಂ ಗಮನಕ್ಕೆ ತರುವುದಾಗಿ ಹೇಳಿ ಮುಂದಿನ ಕ್ರಮ ಜರುಗಿಸಲು ಸರ್ಕಾರ ಮುಂದಾಗಲಿದೆ ಎಂದು ತಿಳಿಸಿದರು.
ಇನ್ನು ಕಬ್ಬು ಕಟಾವು ಮಾಡಬೇಕು ಇದರಿಂದ ಚಿರತೆ ಹಾವಳಿ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತದೆ ಎಂದು ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಭಾಧ್ಯಕ್ಷರ ಗಮನ ಸೆಳೆದರು.
ಚಿರತೆ ಹಾವಳಿ ಹೆಚ್ಚಾಗಲು ಅವುಗಳಿಗೆ ಕಾಡಿನಲ್ಲಿ ಆಹಾರ ಸಿಗುತ್ತಿಲ್ಲ. ಚಿರತೆ ಆಹಾರದ ಪ್ರಾಣಿಗಳು ಕಡಿಮೆ ಆಗಿದ್ದು, ಹೀಗಾಗಿ ಆಹಾರ ಪ್ರಾಣಿಗಳಿರುವ ಕಡೆಗೆ ಅರಣ್ಯ ಇಲಾಖೆ ಅವರು ಹಿಡಿದ ಚಿರತೆಗಳನ್ನು ಬಿಡುವಂತೆ ಸೂಚನೆ ನೀಡಬೇಕು ಎಂದರು.
ಅರಣ್ಯ ಖಾತೆ ಹೊಂದಿರುವ ಮುಖ್ಯಮಂತ್ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಚಿರತೆ ಧಾಮವನ್ನು ತೆರೆಯಬೇಕು. ಕಾಡಿನಲ್ಲಿ ಮಾಂಸಾಹಾರ ಪ್ರಾಣಿಗಳಿಗೆ ಬೇಕಾದ ಸಣ್ಣ ಸಣ್ಣ ಪ್ರಾಣಿಗಳ ಸಂತತಿ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು.