ಬೆಳಗಾವಿ: ವೇತನ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ಸೌಧದ ಬಳಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಉಪವಾಸವಿದ್ದ ಸಾರಿಗೆಯ ಮಹಿಳಾ ಸಿಬ್ಬಂದಿಗಳಿಬ್ಬರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಬೆನ್ನಲ್ಲೇ ಮತ್ತೊಬ್ಬ ನೌಕರರ ದಾಖಲಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಬಸವರಾಜು ಅಸ್ವಸ್ಥಗೊಂಡ ಉಪವಾಸ ಸತ್ಯಾಗ್ರಹ ನಿರತ ಸಾರಿಗೆ ಸಿಬ್ಬಂದಿ. ಅಸ್ವಸ್ಥಗೊಂಡ ಸಿಬ್ಬಂದಿಯನ್ನು ನಗರದ ಜಿಲ್ಲಾಸ್ಪತ್ರೆಗೆ 108 ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ದಾಖಲು ಮಾಡಲಾಗಿದೆ.
ಇತ್ತ ಕಳೆದ ಡಿ.19ರಿಂದ ಉಪವಾಸ ಕುಳಿತಿರುವ ನೌಕರರಲ್ಲಿ ಇನ್ನು ಒಂದಿಬ್ಬರು ನೌಕರರ ಆರೋಗ್ಯದಲ್ಲೂ ಏರುಪೇರಾಗುತ್ತಿದೆ ಎಂದು ಪ್ರತಿಭಟನಾ ನಿರತ ನೌಕರರು ತಿಳಿಸಿದ್ದಾರೆ.
ಇನ್ನು ಡಿ.20ರಂದು ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಅವರು ಮತ್ತೆ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.
ಈ ನಡುವೆಯೇ ಇಂದು ಉಪವಾಸ ಸತ್ಯಾಗ್ರಹ ನಿರತ ಮತ್ತೊಬ್ಬ ನೌಕರರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದೆ. ಆದರೂ ಸರ್ಕಾರ ಈವರೆಗೂ ನೌಕರರ ಬೇಡಿಕೆ ಈಡೇರಿಸಲು ಮುಂದಾಗಿಲ್ಲ.
ಇಂದು ಅಸ್ವಸ್ಥಗೊಂಡ ಸಿಬ್ಬಂದಿಯನ್ನು ನಗರದ ಜಿಲ್ಲಾಸ್ಪತ್ರೆಗೆ 108 ಆಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ವೈದ್ಯರು ಚಿಕಿತ್ಸೆ ನೀಡಲು ಮುಂದಾಗುತ್ತಿದ್ದಾರೆ ಎಂದು ನೌಕರರು ತಿಳಿಸಿದ್ದಾರೆ.
ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಮೀನಮೇಷ ಎಣಿಸುತ್ತಿರುವುದರಿಂದ ನೂರಾರು ಕಿಲೋ ಮೀಟರ್‌ನಲ್ಲಿ ತಮ್ಮ ಸಂಸಾರವನ್ನು ಬಿಟ್ಟು ಹೋರಾಟಕ್ಕೆ ಧುಮುಕಿರುವ ಸಿಬ್ಬಂದಿ ಪ್ರಾಣದ ಹಂಗುತೊರೆದು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತಿದ್ದಾರೆ.