ನ್ಯೂಡೆಲ್ಲಿ: ಭಾರತೀಯ ನೋಟುಗಳಾಗಿದ್ದ ಒಂದು ಸಾವಿರ ರೂ. ಹಾಗೂ 500 ರೂಪಾಯಿ ಮುಖಬೆಲೆಯ ಕರೆನ್ಸಿಯನ್ನು 2016ರಲ್ಲಿ ಅಮಾನ್ಯೀಕರಣ ಮಾಡಿದ್ದ ಕೇಂದ್ರ ಸರ್ಕಾರ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ, ಜನವರಿ 2 ರಂದು ತೀರ್ಪು ಪ್ರಕಟಿಸಲಿದೆ.
ಡಿಸೆಂಬರ್ 7 ರಂದು ಸುಪ್ರೀಂ ಕೋರ್ಟ್, 2016 ರ ನೋಟ್ ಬ್ಯಾನ್ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಗೆ ನಿರ್ದೇಶನ ನೀಡಿತ್ತು ಮತ್ತು ತೀರ್ಪನ್ನು ಕಾಯ್ದಿರಿಸಿತ್ತು.
ಹೀಗಾಗಿ ಸಂವಿಧಾನ ಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಎಸ್.ಎ. ನಜೀರ್ ಅವರು ಜನವರಿ 4 ರಂದು ನಿವೃತ್ತರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿಗದಿತ ದಿನದಂತೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ.
500 ಮತ್ತು 1000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್‌ನೊಂದಿಗೆ ವ್ಯಾಪಕವಾದ ಸಮಾಲೋಚನೆಯ ನಂತರ ಮತ್ತು ನೋಟು ನಿಷೇಧವನ್ನು ಜಾರಿಗೊಳಿಸುವ ಮೊದಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಇನ್ನು ಕೇಂದ್ರ ಸರ್ಕಾರ ನಿರ್ಧಾರ ಪ್ರಶ್ನಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾದ್ದು ಆ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿ ಪೂರ್ಣಳಿಸಿದ್ದು ಅದರ ತೀರ್ಪು ಮಾತ್ರ ಹೊರಬರಬೇಕಿದೆ. ಹೀಗಾಗಿ ಜನವರಿ 2ರಂದು ಸಪ್ರೀಂ ಕೋರ್ಟ್ ತೀರ್ಪು ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.