ಅರ್ಧಕ್ಕೆ ಶಾಲೆ ಬಿಟ್ಟು ಕಾಸರಗೋಡಿನಲ್ಲಿ ಬೀಡಿ ಕಟ್ಟುತ್ತಿದ್ದ ವ್ಯಕ್ತಿ ಅಮೆರಿಕದಲ್ಲಿ ನ್ಯಾಯಾಧೀಶ
ಟೆಕ್ಸಾಸ್: ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ವ್ಯಕ್ತಿ ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದಾರೆ. ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇವರು ಸಾಕ್ಷಿಯಾಗಿದ್ದಾರೆ.
ಅಮೆರಿಕದ ಟೆಕ್ಸಾಸ್ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಕೀಲ ಸುರೇಂದ್ರನ್ ಕೆ. ಪಟ್ಟೇಲ್ ಇಲ್ಲಿನ ಫೋರ್ಟ್ ಬೆಂಡ್ ಕೌಂಟಿ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ಹುಟ್ಟಿ, ಬೆಳೆದ ಸುರೇಂದ್ರನ್, ಶಾಲೆಯನ್ನು ಅರ್ಧಕ್ಕೇ ತೊರೆದು, ಜೀವನೋಪಾಯಕ್ಕಾಗಿ ದಿನಗೂಲಿ ಕೆಲಸ ಮಾಡುತ್ತಿದ್ದರು. ಈ ಕುರಿತು ನೆನಪು ಹಂಚಿಕೊಂಡಿರುವ ಸುರೇಂದ್ರನ್, “ನನ್ನ ಕುಟುಂಬಕ್ಕೆ ಆರ್ಥಿಕ ಮೂಲಗಳು ಇಲ್ಲದೆ ಇದ್ದುದರಿಂದ ನಾನು 10ನೇ ತರಗತಿಯ ನಂತರ ಶಾಲೆ ತೊರೆದು ದಿನಗೂಲಿಯಾಗಿ ಒಂದು ವರ್ಷ ಬೀಡಿ ಕಟ್ಟಿದೆ. ಆ ಅವಧಿಯು ನನ್ನ ಜೀವನ ದೃಷ್ಟಿಕೋನವನ್ನೇ ಬದಲಿಸಿತು” ಎಂದು ಖಾಸಗಿ ವಾಹಿಯೊಂದರ ಸದರ್ಶನದ ವೇಳೆ ತಮ್ಮ ಕಷ್ಟಗಳನ್ನು ನೆನಪಿಸಿಕೊಂಡರು.
ಇನ್ನು ಕೂಲಿ ಮಾಡುತ್ತಿದ್ದ ವೇಳೆಯೇ ತಮ್ಮ ಜೀವನವನ್ನು ಬದಲಾಯಿಸಿಕೊಳ್ಳಲೇಬೇಕು ಎಂಬ ದೃಢ ನಿರ್ಧಾರ ತೆಗೆದುಕೊಂಡಿದ್ದ ಸುರೇಂದ್ರನ್ ಮುಂದೆ ಕಾನೂನು ಪದವಿ ಸೇರಿದಂತೆ ಶಿಕ್ಷಣವನ್ನು ಪೂರೈಸಲು ಅವರ ಗ್ರಾಮದಲ್ಲಿನ ಸ್ನೇಹಿತರು ಆರ್ಥಿಕ ನೆರವು ಒದಗಿಸಿದ್ದರು. ಇದರೊಂದಿಗೆ ವಿದ್ಯಾಭ್ಯಾಸ ಮಾಡುತ್ತಲೇ ಅವರು ಹೋಟೆಲ್ ಒಂದರಲ್ಲಿ ಶುಚಿತ್ವ ಕೆಲಸಕ್ಕೆ ಸೇರಿಕೊಂಡು ಅದರಿಂದಲೂ ಬರುತ್ತಿದ್ದ ಹಣವನ್ನು ಓದಿಗೆ ಮತ್ತು ತಂದೆ ತಾಯಿಗೆ ನೆರವಾದರು.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು LLB ಮುಗಿಸಿದ ಬೆನ್ನಿಗೇ ಭಾರತದಲ್ಲಿ ಆರಂಭಿಸಿದ ವಕೀಲಿಕೆ ವೃತ್ತಿಯಿಂದ ನಾನಿಂದು ಅಮೆರಿಕದಲ್ಲಿ ಯಶಸ್ವಿಯಾಗಲು ಸಾಧ್ಯವಾಗಿದೆ. ಅಮೆರಿಕಾದಲ್ಲೂ ಕೂಡಾ ನನ್ನ ಪಯಣವು ಅಡತಡೆ ಮುಕ್ತವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಅಂದು ಭಾರತದಲ್ಲಿ ವಕೀಲಿಕೆ ವೃತ್ತಿ ಆರಂಭವಾಗಿ ಸುಪ್ರೀಂ ಕೋರ್ಟ್ನಲ್ಲೂ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದೆ ಆ ವೇಳೆ ನನ್ನ ಪತ್ನಿ ನರ್ಸ್ ಆಗಿದ್ದು ಅವರಿಗೆ ಅಮೇರಿಕದಲ್ಲಿ ಕೆಲಸ ಸಿಕ್ಕಿತು ಹೀಗಾಗಿ ನಾನು ಅಮೇರಿಕಕ್ಕೆ ಬಂದು ಇಲ್ಲಿ ವಕೀಲಿಕೆ ವೃತ್ತಿ ಆರಂಭಿಸಿದೆ ಎಂದು ಹೇಳಿದ್ದಾರೆ.
ಇನ್ನು ಈಗಾಗಲೇ ಹೇಳಿದಂತೆ ಟೆಕ್ಸಾಸ್ನಲ್ಲಿನ ಈ ಹುದ್ದೆಗೆ ನಾನು ಸ್ಪರ್ಧಿಸಿದಾಗ ನನ್ನ ಉಚ್ಚಾರಣೆಯ ವಿರುದ್ಧ ಅನೇಕ ಪ್ರತಿಕ್ರಿಯೆಗಳು ಬಂದವು ಮತ್ತು ನನ್ನ ವಿರುದ್ಧ ಋಣಾತ್ಮಕ ಅಭಿಯಾನಗಳು ನಡೆದವು. ನಾನು ಪ್ರಾಥಮಿಕ ಪ್ರಜಾಸತಾತ್ಮಕ ಹುದ್ದೆಗೆ ಸ್ಪರ್ಧಿಸಿದಾಗ ಸ್ವತಃ ನನ್ನ ಪಕ್ಷದವರೇ ನನ್ನ ಗೆಲುವನ್ನು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ನಾನು ಈ ಸಾಧನೆ ಮಾಡಬಹುದು ಎಂದು ಯಾರೂ ಎಣಿಸಿರಲಿಲ್ಲ. ಆದರೆ, ನಾನದನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇನೆ. ಬೇರೆ ಯಾರೂ ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಅವಕಾಶ ನೀಡಬೇಡಿ. ಅದನ್ನು ನಿರ್ಧರಿಸಬೇಕಿರುವುದು ನೀವು ಮಾತ್ರ ಎಂದು ತಮ್ಮ ಸಂದೇಶದಲ್ಲಿ ಕಿವಿಮಾತು ಹೇಳಿದ್ದಾರೆ.
[wp-rss-aggregator limit=”4″]