ದಿನಗಳೆದಂತೆ ಭಾರತ್ ಜೋಡೋ ಯಾತ್ರೆಗೆ ವ್ಯಾಪಕ ಬೆಂಬಲ – ಯುವಕ-ಯುವತಿಯರು ಸಾಥ್
ನ್ಯೂಡೆಲ್ಲಿ: ದಿನಗಳೆದಂತೆ ಭಾರತ್ ಜೋಡೋ ಯಾತ್ರೆಗೆ ವ್ಯಾಪಕ ಬೆಂಬಲ ಸಿಗುತ್ತಿದೆ. ಜನರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ಹರಿಯಾಣದಲ್ಲಿ ಸಾಗುತ್ತಿರುವ ಯಾತ್ರೆಯಲ್ಲಿ ರೈತ ಮುಖಂಡರು, ಯುವಕ-ಯುವತಿಯರು ಮಹಿಳೆಯರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯು ಅಪರೂಪದ ಹಾಗೂ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದು, ಹರಿಯಾಣದಲ್ಲಿರುವ ಭಾರತ್ ಜೋಡೋ ಯಾತ್ರೆಯು 116 ದಿನಗಳನ್ನು ಪೂರೈಸಿದೆ. 2500 ಕಿಮೀಗೂ ಅಧಿಕ ದೂರ ಕ್ರಮಿಸಿದೆ. ಇಂದು ಹರಿಯಾಣದಲ್ಲಿ ಭಾರತ್ ಜೋಡೋ ಯಾತ್ರೆ ಮುಕ್ತಾಯವಾಗಲಿದೆ.
ನಾಳೆ ಪಂಜಾಬ್ ಪ್ರವೇಶಿಸಲಿರುವ ಭಾರತ್ ಜೋಡೋ ಯಾತ್ರೆಗೆ ಅಪಾರ ಪ್ರಮಾಣದ ಜನರು ಬರುವ ನಿರೀಕ್ಷೆ ಇದೆ. ಪಂಜಾಬ್ ಪ್ರವೇಶಕ್ಕೂ ಮುನ್ನ ರಾಹುಲ್ ಗಾಂಧಿ ಅವರು ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥಿಸಲಿದ್ದಾರೆ.
ಈ ಕುರಿತುವ ಟ್ವೀಟ್ ಮಾಡಿರುವ ಪಕ್ಷದ ನಾಯಕ ಜೈರಾಮ್ ರಮೇಶ್, ‘ಭಾರತ್ ಜೋಡೋ ಯಾತ್ರೆಯು ಈಗ ಅಂಬಾಲಾದಲ್ಲಿದೆ. ಹರಿಯಾಣದಲ್ಲಿ ಇಂದು ಕೊನೆಗೊಳ್ಳಲಿದೆ. ನಾಳೆ ಬೆಳಿಗ್ಗೆ ಪಂಜಾಬ್ ಅನ್ನು ಪ್ರವೇಶಿಸಲಿದೆ. ಅಮೃತಸರದಲ್ಲಿರುವ ಅತ್ಯಂತ ಪವಿತ್ರವಾದ ಗೋಲ್ಡನ್ ಟೆಂಪಲ್‌ಗೆ ರಾಹುಲ್ ಭೇಟಿ ನೀಡಲಿದ್ದಾರೆ. ಯಾತ್ರೆಯೊಂದರ ಆರಂಭ ಇದಕ್ಕಿಂತ ಉತ್ತಮವಾಗಿರುವುದಕ್ಕೆ ಸಾಧ್ಯವಿಲ್ಲ. ಸ್ವರ್ಣ ಮಂದಿರದಲ್ಲಿ ರಾಹುಲ್ ಗಾಂಧಿ ಪ್ರಾರ್ಥನೆ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.
ಅಮೃತಸರದಲ್ಲಿರುವ ಸ್ವರ್ಣ ಮಂದಿರ ಸಿಕ್ಖರ ಅತ್ಯಂತ ಪವಿತ್ರ ಸ್ಥಳ. ಇದಕ್ಕೆ ರಕ್ತಸಿಕ್ತ ಇತಿಹಾಸವೂ ಇದೆ. ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟು ಸ್ವರ್ಣ ಮಂದಿರದಲ್ಲಿ ಅಡಗಿಕೊಂಡಿದ್ದ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆನನ್ನು ಕೊಲ್ಲಿಸಲು ಇಂದಿರಾ ಗಾಂಧಿ ಸೈನ್ಯವನ್ನು ಕಳಿಸುತ್ತಾರೆ. ಇದಕ್ಕೆ ಆಪರೇಶನ್ ಬ್ಯೂ ಸ್ಟಾರ್ ಎಂದು ಹೆಸರಿಡಲಾಗಿತ್ತು. ಮಂದಿರದಲ್ಲೇ ಅಡಗಿದ್ದ ಪ್ರತ್ಯೇಕವಾದಿಗಳನ್ನು ಹತ್ಯೆಗೈಯಲು ಭಾರತದ ಸೇನೆ ಯಶಸ್ವಿಯಾಗಿತ್ತು. ಈ ಪವಿತ್ರ ಸ್ಥಳದಲ್ಲಿ ನಡೆದಿದ್ದ ಘಟನೆ ಸಿಕ್ಖರನ್ನು ಕೆರಳಿಸಿತ್ತು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಈ ಕಾರಣಕ್ಕಾಗಿಯೇ, ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು ಇಬ್ಬರು ಬಾಡಿಗಾರ್ಡ್‌ಗಳು ಹತ್ಯೆಮಾಡಿದ್ದರು. ಈ ಸ್ಥಳಕ್ಕೆ ರಾಹುಲ್ ಭೇಟಿ ಪ್ರಾರ್ಥಿಸುತ್ತಿರುವುದು ಎಲ್ಲರ ಕುತೂಹಕ್ಕೆ ಗ್ರಾಸವಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರ್‌ಎಸ್‌ಎಸ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಹರಿಯಾಣದಲ್ಲಿ ಆರ್‌ಎಸ್‌ಎಸ್‌ಗೆ ಕೌರವರ ಸೈನ್ಯವೆಂದು ಕರೆದಿದ್ದರು. 21 ನೇ ಶತಮಾನದಲ್ಲಿ ಕೌರವರು ಖಾಕಿ ಚಡ್ಡಿ ಧರಿಸಿ, ಕೈಯಲ್ಲಿ ಲಾಠಿ ಹಿಡಿದು ನಿಂತಿದ್ದಾರೆ ಎಂದು ಮೂದಲಿಸಿದ್ದಾರೆ. ಮಹಾಭಾರತವು ಹರಿಯಾಣದಲ್ಲಿ ನಡೆದಿದೆ. ಇದು ಮಹಾಭಾರತದ ಪುಣ್ಯಭೂಮಿ. ಈಗ ಅಂದರೆ 21 ನೇ ಶತಮಾನದಲ್ಲಿ ಕೌರವರು ಯಾರೆಂದು ನಿಮಗೆ ಹೇಳುತ್ತೇನೆ. ಅವರು ಖಾಕಿ ಚಡ್ಡಿ ಧರಿಸಿರುತ್ತಾರೆ. ಕೈಯಲ್ಲಿ ಲಾಠಿ ಹಿಡಿದು ನಿಂತಿರುತ್ತಾರೆ. ಶಾಖೆ ನಡೆಸುತ್ತಾರೆ ಎಂದು ಹೇಳಿದ್ದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾಗಿದೆ. ಇದು ಕೇರಳ, ತಮಿಳುನಾಡು, ಕರ್ನಾಟಕದ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ, ದೆಹಲಿ, ಉತ್ತರ ಪ್ರದೇಶಗಳಲ್ಲಿ ಕ್ರಮಿಸಿದೆ.
ನಾಳೆ ಪಂಜಾಬ್ ಪ್ರವೇಶಿಸಲಿದೆ. ಆ ನಂತರ ಕಾಶ್ಮೀರದ ಶ್ರೀನಗರ ಪ್ರವೇಶಿಸಿ ಅಲ್ಲಿ ಕೊನೆಗೊಳ್ಳಲಿದೆ. ಯಾತ್ರೆ 3500 ಕಿಮೀ ಅಧಿಕವಾಗಿ ಕ್ರಮಿಸಲಿದೆ. ಯಾತ್ರೆಯಲ್ಲಿ ಈಗಾಗಲೇ ಲಕ್ಷಾಂತರ ಜನರು ಭಾಗವಹಿಸಿದ್ದಾರೆ.