ಹನೂರು: ಪಟ್ಟಣದ ಹುಲ್ಲೆಪುರದ ಸ.ನಂ 632/2 ರ ಜಮೀನಿಗೆ ಸುಳ್ಳು ದಾಖಲಾತಿ ಸೃಷ್ಟಿಸಿ ಮಾರಾಟ ಮಾಡಿರುವ ಆರೋಪದ ಮೇರೆಗೆ ಐವರ ವಿರುದ್ದ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಹೊರ ವಲಯದ ಹುಲ್ಲೆಪುರದ ಸರ್ವೆ ನಂಬರ್ 632.2ರ ಜಮೀನಿನ ಮಾಲೀಕ ಆಗಾಗ್ಗೆ ಬಂದು ವ್ಯವಸಾಯ ಮಾಡಿಸಿ ನಂತರ ತಮಿಳುನಾಡಿಗೆ ಹೊಗುತ್ತಿರುತ್ತಾರೆ. ಇದರ ದುರುಪಯೋಗ ಮಾಡಿಕೊಂಡು ಕೆಲ ಆರೋಪಿಗಳು ಸಮಾನ ಉದ್ದೇಶದಿಂದ ಮೋಸಮಾಡಬೇಕೆಂದು ಹನೂರು ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ಸುಳ್ಳು ಪತ್ರವನ್ನು ಸೃಷ್ಟಿಸಿಕೊಂಡು ನಂತರ ಮಾರಾಟ ಮಾಡಲು ಮುಂದಾಗಿದ್ದಾರೆ. ಈ ವಿಷಯ ತಿಳಿದ ಪಿರ್ಯಾದಿಯು ಕೊಳ್ಳೇಗಾಲ ನ್ಯಾಯಾಲಯಕ್ಕೆ ಧಾವೆ ಹೋಡಿದ್ದಾರೆ.
ಈ ಸಂಬಂಧ ಆರೋಪಿಗಳಿಗೆ ನೋಟಿಸ್ ಸಹ ಜಾರಿಮಾಡಿದ್ದು ಆರೋಪಿಗಳು ಯಾವುದೇ ಪ್ರತ್ಯುತ್ತರ ನೀಡಿಲ್ಲ. ಆರೋಪಿಗಳು ಕಾನೂನು ಬದ್ಧ ಹಕ್ಕಿಗೆ ಚ್ಯುತಿ ಉಂಟು ಮಾಡಿರುವುದಲ್ಲದೆ ಕಾನೂನು ಬಾಹಿರವಾಗಿ ಜಮೀನನ್ನು ಮಾರಾಟ ಮಾಡಿದ್ದಾರೆ ಎಂದು 1 ರಿಂದ 5ರವರೆಗಿನ ಆರೋಪಿಗಳ ವಿರುದ್ದ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹ ಪ್ರಕರಣಗಳು ಈದೀಗ ತಾನೇ ಬೆಳಕಿಗೆ ಬಂದಿದೆ ಹನೂರಲ್ಲಿ ಈ ತರಹದ ಕರ್ಮಕಾಂಡ ಎಗ್ಗಿಲ್ಲದೆ ನಿತ್ಯ ನೆಡೆಯುತ್ತಿದೆ. ಜಮೀನುಗಳ ಮೂಲ ಮಾಲೀಕರು ಇಲ್ಲದೆ ಇರುವ ವಿಷಯವನ್ನು ತಿಳಿಯುವಂತಹ ಮಧ್ಯವರ್ತಿಗಳು ಸಂಬಂಧ ಪಟ್ಟ ಕಚೇರಿಯಲ್ಲಿ ಸಂಪರ್ಕ ಇಟ್ಟುಕೂಂಡು ತಮ್ಮ ಅಕ್ರಮಕೂಟದ ಮೂಲಕ ಕಾನೂನಿನ ವಿರುದ್ಧದ ಚಟುವಟಿಕೆ ಮುಂದಾಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಪೊಲೀಸರು ಈ ಪ್ರಕರಣದ ಮೂಲಕ ಇದರ ಹಿಂದೆ ಇರುವ ಜಾಲವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಜ್ಞಾವಂತ ಯುವಕರು ಒತ್ತಾಯ ಮಾಡಿದ್ದಾರೆ.