ಮೈಸೂರು: ರೈತರ ಹಿತ ಕಾಪಾಡುವ ಬದಲು ಸರ್ಕಾರ ಕಾರ್ಪೊರೇಟ್ ಕಂಪನಿಗಳ ಹಾಗೂ ಮಧ್ಯವರ್ತಿಗಳ ಲಾಬಿಗೆ ಮಣಿದು ಆರ್‌ಟಿಸಿ ಯ ಬೆಲೆಯನ್ನು 15 ರೂಪಾಯಿಗಳಿಂದ 25 ರೂ.ಗೆ ಏರಿಕೆ ಮಾಡಿ ರೈತರಿಗೆ ಗಾಯದ ಮೇಲೆ ಬರೆ ಹಾಕಲು ಹೊರಟಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು – ಚಾಮರಾಜನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಕಿಡಿಕಾರಿದ್ದಾರೆ.
ಒಂದು ಆರ್‌ಟಿಸಿಯನ್ನು ತೆಗೆಯಲು ಕೇವಲ ರೂ. 5 ಖರ್ಚಾಗುತ್ತದೆ ಈಗಾಗಲೇ 15 ರೂಪಾಯಿ ಪಡೆಯುತ್ತಿದ್ದ ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಸಹಕಾರಿಯಾಗುವಂತೆ ದರ ಏರಿಕೆ ಮಾಡಿದೆ.
ಒಂದೇ ಸಲ 10 ರೂಪಾಯಿ ಏರಿಕೆ ಮಾಡಿ ಮತ್ತಷ್ಟು ಬೆಲೆ ಏರಿಕೆಯಿಂದ ರಾಜ್ಯದ ರೈತರಿಗೆ ಸಮಸ್ಯೆ ತಂದೊಡ್ಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಈಗಾಗಲೇ ಕೊರೊನಾ ಸಂಕಷ್ಟ ಹಾಗೂ ಅತಿವೃಷ್ಟಿ ಅನಾವೃಷ್ಟಿಯಿಂದ ಕಳೆದ ಮೂರು ವರ್ಷಗಳಿಂದ ಕಷ್ಟ ಅನುಭವಿಸಿದ್ದಾರೆ. ಈ ಮಧ್ಯೆ ಇದರ ಬೆಲೆಯನ್ನು ಏರಿಕೆ ಮಾಡಿರುವುದು ಖಂಡನೀಯ ಈ ಕೂಡಲೇ ಸರ್ಕಾರ ಹತ್ತು ರೂಪಾಯಿಗೆ ಇಳಿಸಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.