ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಕಳೆದ 2021ರ ಏಪ್ರಿಲ್‌ನಲ್ಲಿ ಮಾಡಿದ ಮುಷ್ಕರದ ವೇಳೆ ಬಿಎಂಟಿಸಿಯಲ್ಲಿ ವಜಾ ಆದ ನೌಕರರ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಪೀಠ ವಾದ ಪ್ರತಿವಾದವನ್ನು ಆಲಿಸಿದ ಬಳಿಕ ಅಂತಿಮ ಆದೇಶವನ್ನು ಫೆಬ್ರವರಿ 1ಕ್ಕೆ ಕಾಯ್ದಿರಿಸಿದೆ.
ಇನ್ನು ಕಲಾಪ ಆರಂಭವಾಗುತ್ತಿದ್ದಂತೆ ಎರಡು ಕಡೆಯ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಫೆ.1ರ ಬುಧವಾರಕ್ಕೆ ಅಂತಿಮ ಆದೇಶವನ್ನು ಕಾಯ್ದಿರಿಸಿದ್ದಾರೆ. ಆದ್ದರಿಂದ ನೌಕರರು ಯಾವುದೇ ಗೊಂದಲಕ್ಕೂ ಒಳಗಾಗದೇ ತಾಳ್ಮೆಯಿಂದ ಸಹಕರಿಸಬೇಕು ಎಂದು ವಜಾಗೊಂಡ ನೌಕರರು ಮನವಿ ಮಾಡಿದ್ದಾರೆ.
ಮತ್ತೆ ಮುಂದಿನ ದಿನಗಳಲ್ಲಿ ಬಿಎಂಟಿಸಿ ಆಡಳಿತ ಮಂಡಳಿ ಕಡೆಯಿಂದ ಹೊಸ ಜಂಟಿ ಮೆಮೋಗಳು ಬಿಡುಗಡೆ ಮಾಡುವ ಸಂಭವವಿದ್ದು ನೌಕರರಲ್ಲಿ ಗೊಂದಲ ಮೂಡಿಸುವ ಹುನ್ನಾರ ನಡೆಯಲಿದೆ. ಹೀಗಾಗಿ ನೌಕರರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.
ಇನ್ನು ಮುಂದುವರಿದು ನಮ್ಮ ಪರವಾಗಿ ಹೈಕೋರ್ಟ್‌ನ ಹಿರಿಯ ವಕೀಲರಾದ ಸುಬ್ಬರಾವ್ ಅವರು ವಾದಮಂಡಿಸಿದ್ದು, ನೌಕರರು ಯಾವುದೇ ತಪ್ಪು ಮಾಡಿಲ್ಲ ಆದ್ದರಿಂದ ಕಾರ್ಮಿಕ ನ್ಯಾಯಾಲಯ ನೀಡಿರುವ ಮಧ್ಯಂತರ ಪರಿಹಾರವನ್ನು ಕೊಡಲೇಬೇಕೆಂದು ಪ್ರಬಲವಾಗಿ ವಾದ ಮಂಡಿಸಿದರು. ಈ ಸಂಬಂಧ ಪ್ರತಿವಾದ ಮಂಡಿಸಿದ ಬಿಎಂಟಿಸಿ ಪರ ವಕೀಲರು ಮತ್ತೊಂದು ತಿಂಗಳು ಕಾಲವಕಾಶ ಕೇಳಿದರು. ಆದರೆ ಅದನ್ನು ನ್ಯಾಯಪೀಠ ತಳ್ಳಿಹಾಕಿತು.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಅಂತಿಮ ಆದೇಶಕ್ಕೆ ದಿನಾಂಕ ನಿಗದಿ ಮಾಡಿದ್ದು, ವಜಾಗೊಂಡ ನೌಕರರು ಆತಂಕಕ್ಕೆ ಒಳಗಾಗದೆ ನ್ಯಾಯಾಲಯದ ತೀರ್ಪಿನತ್ತ ಗಮನ ಹರಿಸೋಣ ಎಂದು ಮನವಿ ಮಾಡಿದ್ದಾರೆ.