ಮಾನ್ಯರೇ: BMTC ಹಾಗೂ KSRTC ಸಂಸ್ಥೆಗಳಳಲ್ಲಿ ಹೊರ ಗುತ್ತಿಗೆ ಅಥವಾ ಖಾಸಗಿ ಸಂಸ್ಥೆಯ ವತಿಯಿಂದ ಚಾಲಕರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸುವ ಮೂಲಕ ಸರ್ಕಾರ ಈ ಸಂಸ್ಥೆಗಳಲ್ಲಿ ಖಾಲಿಯಿರುವ ಚಾಲಕ ಹುದ್ದೆಗಳನ್ನು ಸಂಸ್ಥೆಯ ವತಿಯಿಂದ ನೇರವಾಗಿ ನೇಮಕ ಮಾಡಿಕೊಳ್ಳುವುದಕ್ಕೆ ಆದೇಶ ಹೊರಡಿಸಬೇಕು.
ಈಗ ಮಧ್ಯವರ್ತಿ ಸಂಸ್ಥೆಗಳ ಮೂಲಕ ಹೊರ ಗುತ್ತಿಗೆ ಅಥವಾ ಖಾಸಗಿಯಾಗಿ ನೇಮಿಸಿಕೊಳ್ಳುತ್ತಿರುವುದು ಈ ನಾಡಿನ ಲಕ್ಷಾಂತರ ಯುವಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಹೊರ ಗುತ್ತಿಗೆ ಪದ್ಧತಿ ಯುವಕರ ಪಾಲಿಗೆ ಮರಣ ಶಾಸನವಿದ್ದಂತೆ, ಇದೊಂದು ರೀತಿಯಲ್ಲಿ ಆಧುನಿಕ ಗುಲಾಮಗಿರಿ ಎಂದು ಹೇಳಬಹುದು.
ಏಕೆಂದರೆ ಒಂದು ಸಂಸ್ಥೆಯಿಂದ ಕೆಲಸ ಮಾಡುವ ಒಬ್ಬ ಸಿಬ್ಬಂದಿ ಅದೇ ಸಂಸ್ಥೆಯ ವತಿಯಿಂದ ನೇರವಾಗಿ ಸಂಬಳವನ್ನು ಪಡೆಯುವಲ್ಲಿ ಮಧ್ಯವರ್ತಿ ಸಂಸ್ಥೆಯ ಮೂಲಕ ಪಡೆಯುವುದು ಗುಲಾಮಗಿರಿಯಲ್ಲದೆ ಮತ್ತೇನೆಂದು ಹೇಳಬೇಕು? ಹಿಂದೆ ಗುಲಾಮಗಿರಿಯಲ್ಲಿ ಸಹ ಇದೇ ಇತ್ತು ಹೀಗಾಗಿ ಮತ್ತೆ ಗುಲಾಮಗಿರಿ ಇತಿಹಾಸ ಮರುಕಳಿಸದಂತೆ ಸರ್ಕಾರ ಯುವಕರಿಗೆ ನೇರವಾಗಿ ಆದ್ಯತೆ ನೀಡಬೇಕಿದೆ.
ಇನ್ನು ಸಾರಿಗೆ ಇಲಾಖೆಯ ವಿಷಯಕ್ಕೆ ಬರುವುದಾದರೆ ಎಲೆಕ್ಟಿಕ್ ಬಸ್‌ಗಳ ಸಂಚಾರದ ನೆವದಲ್ಲಿ ಕೇವಲ ಬಸ್ಸುಗಳನ್ನು ಮಾತ್ರ ಖಾಸಗಿ ಸಂಸ್ಥೆಗಳಿಂದ ತೆಗೆದುಕೊಳ್ಳದೆ, ಆ ಬಸ್ಸುಗಳ ಚಾಲಕರನ್ನು ಸಹ ಅದೇ ಸಂಸ್ಥೆ ನೀಡಬೇಕೆಂಬ ನಿಮ್ಮ ಸರ್ಕಾರದ ನಿಲುವು ಬೇಜವಾಬ್ದಾರಿಯಿಂದ ಕೂಡಿದೆ.
ಅಷ್ಟು ಮಾತ್ರವಲ್ಲದೆ, ಮುಂದೊಂದು ದಿನ ಇಡೀ ಸಾರಿಗೆ ವ್ಯವಸ್ಥೆಯನ್ನು ಎಲೆಕ್ಟ್ರಿಕ್ ಆಧಾರಿತವಾಗಿ ಮಾಡಿದರೆ, ಆ ಎಲೆಕ್ಟ್ರಿಕ್ ಬಸ್‌ಗಳ ಜೊತೆಯಲ್ಲಿ ಬರುವ ಎಲ್ಲ ಚಾಲಕರು ಖಾಸಗಿಯಾಗಿಯೇ ನೇಮಕವಾಗುತ್ತಾರೆ ಎಂಬ ಮುಂದಾಲೋಚನೆಯಷ್ಟೇ. ಈ ಮೂಲಕ ಇಡೀ ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣ ಮಾಡುವ ಹುನ್ನಾರವನ್ನು ಸರ್ಕಾರ ಹಾಗೂ ಅಧಿಕಾರಿಗಳು ಕೂಡಲೇ ಕೈ ಬಿಡಬೇಕು.
ಈ ನಿಮ್ಮ ಮುಂದಾಲೋಚನೆಯಿಂದ ರಾಜ್ಯದ ಯುವಕರು ದಿನಗೂಲಿ ನೌಕರರಾಗುತ್ತಾರೆಯೇ ಹೊರತು ನೌಕರರಾಗುವುದಿಲ್ಲವೆಂದು ಅರ್ಥ ಮಾಡಿಕೊಳ್ಳಬೇಕು. ಇದರ ಬದಲು – ಎಲೆಕ್ಟ್ರಿಕ್ ಬಸ್ಸುಗಳನ್ನು ಖಾಸಗಿ ಸಂಸ್ಥೆಯಿಂದ ಪಡೆದು ಅವುಗಳನ್ನು ಸಂಸ್ಥೆಯ ಚಾಲಕರಿಂದ ಮುನ್ನಡಿಸಿದರೆ ಸಂಸ್ಥೆಗೆ ಹಾಗೂ ಸಂಸ್ಥೆಯ ನೌಕರರಿಗೆ ಒಳಿತಾಗುತ್ತದೆ.
ಇಲ್ಲದೆ ಹೋದರೆ, ಸಾರಿಗೆ ಬಸ್ಸುಗಳ, ಚಾಲಕರು, ಅಸಂಘಟಿತರಾಗಿ ಮಧ್ಯವರ್ತಿ ಸಂಸ್ಥೆಯ ಲಾಭದಾಸೆಗೆ ಬಲುಪಶುಗಳಾಗಬೇಕಾದ ಪರಿಸ್ಥಿತಿ ಬರುತ್ತದೆ. ಅತ್ತ ಕೋವಿಡ್ -19 ಕಾರಣದಿಂದ ಮಧ್ಯದಲ್ಲೇ ನಿಂತ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ. ಇತ್ತ ಚಾಲಕರನ್ನು ಖಾಸಗಿಯಾಧಾರದಲ್ಲಿ ನೇಮಿಸಿಕೊಂಡು ಸಾರಿಗೆ ಸಂಸ್ಥೆಯಲ್ಲಿ ಖಾಯಂ ನೌಕರವಾಗಬೇಕೆಂಬ ಕನಸನ್ನು ಕಾಣುತ್ತಿರುವ ನಮ್ಮಂತಹ ಲಕ್ಷಾಂತರ ಯುವಕರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ.
ಹೀಗಾಗಿ ದಯವಿಟ್ಟು ತಾವುಗಳು ಸಂಸ್ಥೆಯಲ್ಲಿ ಹೊರಗುತ್ತಿಗೆ ಮೂಲಕ ಖಾಸಗಿಯಾಗಿ ಚಾಲಕರನ್ನು ನೇಮಿಸಿಕೊಳ್ಳವುದನ್ನು ತಕ್ಷಣವೇ ಬಿಟ್ಟು ಸಂಸ್ಥೆಯ ವತಿಯಿಂದ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬೇಕಾಗಿ ತಮ್ಮಲ್ಲಿ ವಿನಂತಿ.
ಧನ್ಯವಾದಗಳೊಂದಿಗೆ
ಇತಿ ತಮ್ಮ
l ಭೀಮರಾಯ. ಮೊ.ನಂ. 9739200893