ಚಿಕ್ಕಬಳ್ಳಾಪುರ: ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 15476 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಮಾರ್ಚ್ 27 ರಿಂದ ಏಪ್ರಿಲ್ 09 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ರವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ . ಪರೀಕ್ಷೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾ.27 ಶುಕ್ರವಾರ ರಂದು ಕನ್ನಡ, ಮಾ. 30 ಸೋಮವಾರ ರಂದು ವಿಜ್ಞಾನ, ಏ. 1 ಬುಧವಾರ ರಂದು ಇಂಗ್ಲಿಷ್, ಏಪ್ರಿಲ್ 3 ರಂದು ಹಿಂದಿ, ಏ. 7 ರಂದು ಗಣಿತ, ಏ.09 ರಂದು ಸಮಾಜ ಪರೀಕ್ಷೆ ನಡೆಯಲಿದ್ದು, ಏ. 9ರಂದು ಪರೀಕ್ಷೆ ಮುಕ್ತಾಯವಾಗಲಿದೆ. ಎಲ್ಲಾ ವಿಷಯಗಳು ಬೆಳಗ್ಗೆ 9-30 ರಿಂದ ಮದ್ಯಾಹ್ನ 12-30 ರವರೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯ ಒಟ್ಟು 64 ಪರೀಕ್ಷಾ ಕೇಂದ್ರಗಳಲ್ಲಿರುವ 645 ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಪ್ರತೀ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆ ಪತ್ರಿಕೆ ಸ್ವೀಕರಿಸಲು ಮುಖ್ಯ ಅಧೀಕ್ಷಕರು ಮತ್ತು ಕಸ್ಟೋಡಿಯನ್ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾದ್ಯಂತ ತಾಲೂಕು ಜಾಗೃತದಳ, ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿ.ಇ.ಒ) ಗಳು ಸೇರಿದಂತೆ 6 ತಂಡಗಳು ನೇಮಕ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 29 ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಾಗೇಪಲ್ಲಿ 3, ಚಿಕ್ಕಬಳ್ಳಾಪುರ 7, ಚಿಂತಾಮಣಿ, 6, ಗೌರಿಬಿದನೂರು 7, ಗುಡಿಬಂಡೆ2, ಶಿಡ್ಲಘಟ್ಟ 4, ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿರಿ ಡೆಡ್ಲಿ ಕೊರೊನಾಗೆ ಎಸ್ಸೆಸ್ಸೆಲ್ಸಿ ಸೇರಿ ಎಲ್ಲಾ ಪರೀಕ್ಷೆಗಳು ಮುಂದೂಡಿಕೆ
ಜಿಲ್ಲೆಯಲ್ಲಿ 64 ಪರೀಕ್ಷಾ ಕೆಂದ್ರಗಳ ಸುತ್ತಮುತ್ತ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದರು. ಡಿ.ವೈ.ಎಸ್.ಪಿರವಿಶಂಕರ್, ಜಿಲ್ಲಾ ಖಜಾನೆಯ ಉಪನಿರ್ದೇಶಕ ಬಿ.ಎಂ.ಮುನಿರೆಡ್ಡಿ ಹಾಗೂ ಎಲ್ಲಾ ತಾಲೂಕುಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.