ಬೆಂಗಳೂರು: ಬಿಎಂಟಿಸಿ ಚನ್ನಸಂದ್ರ (RR ನಗರ) ಘಟಕ -21ರಲ್ಲಿ ಡ್ಯೂಟಿ ಕೊಡದಿದ್ದಕ್ಕೆ ಮನನೊಂದು ನಿರ್ವಾಹಕರೊಬ್ಬರು ಮೊನ್ನೆ ಆತ್ಮಹತ್ಯೆಗೆ ಯತ್ನಿಸಿದಕ್ಕೆ ಮೇಲಧಿಕಾರಿಗಳ ಕಿರುಕುಳವೇ ಕಾರಣ ಎಂದು ನೌಕರರು ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ಟಿಐ ಒಬ್ಬರೇ ಕಿರಿಕುಳ ನೀಡುತ್ತಿಲ್ಲ. ಘಟಕದಲ್ಲಿ ಟಿಐಗಿಂತ ಮೇಲಿನ ಅಧಿಕಾರಿಗಳಾದ ಡಿಪೋ ಮ್ಯಾನೇಜರ್ (ಡಿಎಂ), ಎಟಿಎಸ್ ಅವರು ಇದ್ದು ಟಿಐ ನೌಕರರ ಮೇಲೆ ದರ್ಪ ಮೆರೆಯುವುದಕ್ಕೆ ಈ ಅಧಿಕಾರಿಗಳು ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದು ಕೆಲ ನೌಕರರು ಆರೋಪಿಸಿದ್ದಾರೆ.
ಇಲ್ಲಿ ಈ ಅಧಿಕಾರಿಗಳ ಅಪ್ಪಣೆ ಇಲ್ಲದೆ ಟಿಐ ಶೋಭಾ ಅವರು ಈ ರೀತಿ ಒಬ್ಬ ನೌಕರನನ್ನು ನಡೆಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಅಂದರೆ ಈ ಕಿರುಕುಳ ಕೊಡುವುದರಲ್ಲಿ ಡಿಎಂ ಪಾತ್ರವು ಬಹಳ ಇದೆ. ಘಟಕದಲ್ಲಿ ರಜೆ ಬೇಕು ಎಂದರೂ ಲಂಚಕೊಡಬೇಕು ಇಲ್ಲದಿದ್ದರೆ ನಮ್ಮ ರಜೆಯನ್ನೇ ನಾವು ಪಡೆಯಲೂ ಸಾಧ್ಯವಿಲ್ಲ ಎಂಬ ಆರೋಪವನ್ನು ಮಾಡಿದ್ದಾರೆ.
ನೌಕರರ ಆರೋಪಕ್ಕೆ ಪುಷ್ಟಿ ನೀಡುವಂತೆ ಘಟಕ ವ್ಯವಸ್ಥಾಪಕರು ಬೆಳಗ್ಗೆ ಬಂದ ಕೂಡಲೇ ನೌಕರರ ಹಾಜರಿ ಪುಸ್ತಕವನ್ನು ಮುಂದೆ ಇಟ್ಟುಕೊಂಡು ಎಟಿಎಸ್, ಟಿಐ ಮತ್ತು ಟಿಸಿಗಳನ್ನು ಕರೆದು ಈ ದಿನ ಇವರಿಗೆ ಡ್ಯೂಟಿ ಕೊಡಬೇಡಿ, ಅವರನ್ನು ಡಿಪೋದಲ್ಲೇ ಕೂರಿಸಿ ಬಳಿಕ ಮನೆಗೆ ಕಳುಹಿಸಿ ಗೈರುಹಾಜರಿ ತೋರಿಸಬೇಕು ಎಂದು ತಮ್ಮ ಈ ಅಧೀನ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶ ನೀಡುತ್ತಾರೆ ಎಂದು ತಿಳಿದು ಬಂದಿದೆ.
ಘಟಕ ವ್ಯವಸ್ಥಾಪಕರು ಹೇಳಿದವರಿಗೆ ಅಧಿಕಾರಿಗಳು ಡ್ಯೂಟಿ ಕೊಡೋದಿಲ್ಲ. ಇದರಿಂದ ಘಟಕದಲ್ಲಿ ಹಲವಾರು ನೌಕರರು ಮಾನಸಿಕವಾಗಿ ಮನನೊಂದು ಖಿನ್ನತೆಗೆ ಜಾರುತ್ತಿದ್ದಾರೆ ಎಂಬ ಆರೋಪವನ್ನು ಘಟಕದ ನೌಕರರೇ ಮಾಡುತ್ತಿದ್ದಾರೆ.
ಈ ಅಧಿಕಾರಿಗಳ ಲಂಚಬಾಕ ತನದಿಂದ ನಿತ್ಯ ಕರ್ತವ್ಯಕ್ಕೆಂದು ಬರುವ ನೌಕರರು ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದಾರೆ. ಅಲ್ಲದೆ ಏನು ತಿಳಿಯದ ಅಮಾಯಕ ನೌಕರರು ತಮಗೆ ಡ್ಯೂಟಿ ಕೊಡದವರನ್ನು ನೇರವಾಗಿ ಹೊಣೆ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೇ ನೌಕರರಿಂದ ಕೇಳಿ ಬರುತ್ತಿದೆ.