ಕರ್ನಾಟಕ ರಾಜ್ಯ ಬಜೆಟ್ 2023-24: ವಿದ್ಯುತ್ ಮಗ್ಗ ನೇಕಾರರು ಮತ್ತು ಮಗ್ಗ ಕಾರ್ಮಿಕರಿಗೂ ಸಹ ನೇಕಾರ್ ಸಮ್ಮಾನ್ ಯೋಜನೆ ವಿಸ್ತರಣೆ. ಇನ್ನು ನೇಕಾರ ಸಮ್ಮಾನ್ ಯೋಜನೆಯಡಿ ನೀಡಲಾಗುತ್ತಿದ್ದ ಸಹಾಯ ಧನ 3 ಸಾವಿರದಿಂದ 5 ಸಾವಿರಕ್ಕೆ ಏರಿಕೆ.
8 ಲಕ್ಷಕ್ಕೂ ಹೆಚ್ಚು ಶಾಲಾ-ಕಾಲೇಜ್ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಒದಗಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಈ ಮೂಲಕ ಯುವಜನರ ಬೆಂಬಲ ಪಡೆಯಲು ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು ಭೂ ರಹಿತ ಕೃಷಿ ಮಹಿಳಾ ಕಾರ್ಮಿಕರಿಗೆ 500 ರೂ. ಸಹಾಯಧನ, 30 ಲಕ್ಷ ಮಹಿಳೆಯರಿಗೂ ಕೂಡ ಉಚಿತ ಪಾಸ್, ಇದರ ಜತೆಗೆ ಸ್ತ್ರೀ ಸಬಲೀಕರಣಕ್ಕೆ ರಾಜ್ಯ ಬಜೆಟ್ನಲ್ಲಿ ಬಂಪರ್ ಘೋಷಣೆ ಮಾಡಲಾಗಿದೆ.
ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ: ಆಯವ್ಯಯ 2023-24ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ ಜಾರಿಗೊಳಿಸಲಾಗಿದೆ. ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋಟಿ ರೂಪಾಯಿ ಘೋಷಣೆ.ಅರೆ ಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ, ಕಿಂಡಿ ಅಣೆ, ನಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಆದ್ಯತೆ ನೀಡಲಾಗಿದ್ದು ಈ ಎರಡೂ ಯೋಜನೆಗಳಿಗೆ 75 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.
ಜಲನಿಧಿ ಯೋಜನೆ: ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ಮಿಸಿ ನೀರು ಸಂರಕ್ಷಣಾ ಕಾಮಗಾರಿಗಳಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಲನಿಧಿ ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು. ಇದರಡಿಯಲ್ಲಿ ನರೇಗಾ ಯೋಜನೆಯ ಸಮನ್ವಯದೊಂದಿಗೆ ಎಲ್ಲಾ ರೈತರಿಗೆ ತಮ್ಮ ಜಮೀನಿನಲ್ಲಿ ಜಲಹೊಂಡವನ್ನು ನಿರ್ಮಿಸಲು ಪ್ರೋತ್ಸಾಹಿಸಲಾಗುವುದು.
ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ: ಕರ್ನಾಟಕವು ತೋಟಗಾರಿಕೆ ವಲಯದಲ್ಲಿ ಅಪಾರ ಸಾಧನೆ ಮಾಡಿ ದೇಶದಲ್ಲಿಯೇ ಅತ್ಯುತ್ತಮ ತೋಟಗಾರಿಕೆ ರಾಜ್ಯ ಎಂದು ಪ್ರಶಸ್ತಿ ಪಡೆದಿದೆ. ರಾಜ್ಯದ 26.21 ಲಕ್ಷ ಹೆಕ್ಟೇರ್ ವಿಸ್ತೀರ್ಣ ಪ್ರದೇಶದ ತೋಟಗಾರಿಕೆ ಬೆಳೆಗಳಿಂದ ಲಭಿಸುವ 242 ಲಕ್ಷ ಮೆಟ್ರಿಕ್ಟನ್ವಾರ್ಷಿಕ ಉತ್ಪನ್ನದ ಮೌಲ್ಯವು 66,263 ಕೋಟಿ ರೂ. ಗಳಾಗಿದ್ದು, ಇದು ರಾಜ್ಯದಲ್ಲಿನ ಸಮಗ್ರ ಕೃಷಿ ವಲಯದ ಒಟ್ಟಾರೆ ಆದಾಯದ ಶೇ.30 ರಷ್ಟಿದೆ.
ತಂತ್ರಜ್ಞಾನಕ್ಕೆ ಒತ್ತುಕೊಟ್ಟು ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆಯ ಮೂಲಕ ರೈತರಿಗೆ ಉತ್ತಮ ಆದಾಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ರಫ್ತು ಮತ್ತು ಸಂಸ್ಕರಣೆಯ ಉತ್ತೇಜನಕ್ಕೆ ರೈತ ಸಂಪದ ಯೋಜನೆಯಡಿ ಕೆಪೆಕ್ ಸಂಸ್ಥೆಯ ಮೂಲಕ 100 ಕೋಟಿ ರೂ. ಗಳಲ್ಲಿ ಯೋಜನೆ ರೂಪಿಸಲಾಗುವುದು.
‘ಒಂದು ತೋಟ ಒಂದು ಬೆಳೆ’: ತೋಟಗಾರಿಕೆ ಇಲಾಖೆಯಡಿಯಲ್ಲಿನ 12 ತೋಟಗಳಲ್ಲಿ ‘ಒಂದು ತೋಟ ಒಂದು ಬೆಳೆ’ ಯೋಜನೆಯಡಿ ಆಯಾ ಭಾಗದ ಕೃಷಿ- ಹವಾಮಾನ- ಮಣ್ಣಿನ ಗುಣಕ್ಕೆ ಅನುಗುಣವಾಗಿ ತೋಟಗಾರಿಕೆ ಉತ್ಪಾದಕತೆಯನ್ನು ಹೆಚ್ಚಿಸಲು 10 ಕೋಟಿ ರೂ. ಗಳ ಒಂದು ಬಾರಿಯ ವಿಶೇಷ ಅನುದಾನ ನೀಡಲಾಗುವುದು.
ರಾಜ್ಯದಲ್ಲಿ ಆಲೂಗಡ್ಡೆ ಬೆಳೆಯಲು ಬೀಜವನ್ನು ಉತ್ತರದ ರಾಜ್ಯಗಳಿಂದ ಆಮದು ಮಾಡಲಾಗುತ್ತಿತ್ತು. ಆಲೂಗಡ್ಡೆ ಬಿತ್ತನೆಯಲ್ಲಿ ಸ್ವಾವಲಂಬನೆ ಸಾಧಿಸಲು ಮೊದಲ ಬಾರಿಗೆ ಎಪಿಕಲ್ ರೂಟ್ ಕಲ್ಟ್ತಂತ್ರಜ್ಞಾನವನ್ನು ಯೋಗ್ಯ ದರದಲ್ಲಿ ಪರಿಚಯಿಸಲಾಗುವುದು.
ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ: ಅಡಿಕೆ ಬೆಳೆಯನ್ನು ಬಾಧಿಸುವ ರೋಗಗಳ ನಿರ್ವಹಣೆಗೆ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಜತೆಗೆ ಉತ್ಪಾದಕತೆ ಹೆಚ್ಚಿಸುವ ಅಗತ್ಯತೆಯನ್ನು ಮನಗಂಡು ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ.ಗಳ ನೆರವು ನೀಡಲಾಗುವುದು.
ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ: ರಾಜ್ಯದಲ್ಲಿ ಶ್ರೀಗಂಧ ಬೆಳೆಸುವುದು, ಕಟಾವಣೆ ಮತ್ತು ಮಾರಾಟದ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವ ಬಗ್ಗೆ ಹಿಂದಿನ ಆಯವ್ಯಯದಲ್ಲಿ ಘೋಷಿಸಿದಂತೆ ಅರಣ್ಯ ಇಲಾಖೆಯ ವತಿಯಿಂದ ಕ್ರಮವಹಿಸಲಾಗಿದೆ. ಈ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ಕ್ಷೇತ್ರಗಳಲ್ಲಿ ಸುಧಾರಿತ ಶ್ರೀಗಂಧ ಪ್ರಬೇಧಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸಲಾಗುವುದು.
ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯವನ್ನು ಸ್ಥಾಪಿಸಲಾಗುವುದು.ದ್ರಾಕ್ಷಿ ಬೆಳೆಗಾರರಿಗೆ ನೆರವಾಗಲು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿ ಮುಖಾಂತರ 100 ಕೋಟಿ ರೂ. ಗಳ ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದು ಬಜೆಟ್ನಲ್ಲಿ ಸಿಎಂ ವಿವರಿಸಿದ್ದಾರೆ.