ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮೈಸೂರು ಮತ್ತು ಕೊಡಗು ಜಿಲ್ಲಾ ಪ್ರವಾಸ ಮಾಡಿ ಸಾರಿಗೆ ನೌಕರರ ಕುಂದುಕೊರತೆ ಆಲಿಸಲಿದ್ದಾರೆ.
ಶೀಘ್ರದಲ್ಲೇ ಸಂಘದ ಅಧ್ಯಕ್ಷರು ಮತ್ತು ಕಾನೂನು ಸಲಹೆಗಾರರ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು ಮೈಸೂರು ಸಾರಿಗೆ ವಿಭಾಗದ ನೌಕರರಿಗೆ ಡಿಪೋ ಮಟ್ಟದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಘಟಕ ಅಧಿಕಾರಿಗಳ ಜತೆಯೇ ಚರ್ಚಿಸಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಿಲಾಗುವುದು.
ಡಿಪೋ ಮಟ್ಟದ ಅಧಿಕಾರಿಗಳ ವಿರುದ್ಧ ಬರುವ ದೂರುಗಳನ್ನು ಅಂದರೆ, ರಜೆ ಡ್ಯೂಟಿ ಕೊಡುವುದಕ್ಕೆ ಹಣ ಕೇಳುವ ಪ್ರಕರಣಗಳ ಬಗ್ಗೆ ನಾವು ಭೇಟಿ ಮಾಡಿದ ವೇಳೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದರೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಎಂಡಿಗಳಿಗೆ ಲಿಖಿತವಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು. ಜತೆಗೆ ಲೋಕಾಯುಕ್ತಕ್ಕೂ ದೂರು ನೀಡಲಾಗುವುದು ಎಂದು ಕಾನೂನು ಸಲಹೆಗಾರರಾದ ವಕೀಲ ಎಚ್.ಬಿ.ಶಿವರಾಜು ತಿಳಿಸಿದ್ದಾರೆ.
ಇನ್ನು ಇದಿಷ್ಟೇ ಅಲ್ಲದೆ ಸಾರ್ವಜನಿಕರು ಕೂಡ ತಮ್ಮ ಗ್ರಾಮಗಳಿಗೆ ಬಸ್ ಬರದಿದ್ದರೆ ಆ ಬಗ್ಗೆಯೂ ಲಿಖಿತವಾಗಿ ಮಾಹಿತಿ ನೀಡಿದರೆ ಅದನ್ನು ಕೂಡ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದು ಸಾಧ್ಯವಾದಷ್ಟು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ಭೈರೇಗೌಡ, ಪ್ರಧಾನ ಕಾರ್ಯದರ್ಶಿ ಜಯದೇವ್, ಉಪಾಧ್ಯಕ್ಷ ಪ್ರಕಾಶ್, ನಿವೃತ್ತ ಡಿಟಿಒ ಹಾಗೂ ಸಂಘದ ಕಾರ್ಯಾಧ್ಯಕ್ಷ ವೇಣುಗೋಪಾಲ್, ನಿರ್ದೇಶಕರಾದ ಮುಂಜುನಾಥ್, ಮಹದೇವ್ ಇತರರು ಪ್ರವಾಸದಲ್ಲಿ ಇರಲಿದ್ದಾರೆ ಎಂದು ವಕೀಲರಾದ ಶಿವರಾಜು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಕರಾರಸಾಸಂ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ಮೊ.ನಂ: 9481211019 ಸಂಪರ್ಕಿಸಬಹುದು.