ಬೆಂಗಳೂರು: ಇತ್ತೀಚೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್ ಬಳಿ ಪತ್ತೆಯಾಗಿದ್ದ 10 ಲಕ್ಷ ರೂಪಾಯಿಯ ಮೂಲ ಪತ್ತೆಯಾಗಿದೆ. ಜಗದೀಶ್ ಅವರು ಮೂವರು ವ್ಯಕ್ತಿಗಳಿಂದ ಈ ಹಣವನ್ನು ಸಾಲವಾಗಿ ಪಡೆದಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಚೆಕ್‌ಬೌನ್ಸ್ ಪ್ರಕರಣವೊಂದರಲ್ಲಿ ಸಿಲುಕಿದ್ದ ಜಗದೀಶ್ ಅವರು ಇದರಿಂದ ಹೊರಬರುವ ಸಲುವಾಗಿ ಗುತ್ತಿಗೆದಾರರಿಂದ 5 ಲಕ್ಷ ರೂ. ಅನ್ನು ತಮ್ಮ ಸಹೋದ್ಯೋಗಿಯಿಂದ, 3.50 ಲಕ್ಷ ರೂ. ಹಾಗೂ ಸ್ನೇಹಿತರಿಂದ 1.50 ಲಕ್ಷ ರೂ. ಸಾಲ ಪಡೆದಿದ್ದರು. ಅದನ್ನು ಸಾಲಗಾರರಿಗೆ ಕೊಡಲು ಹೋಗುವಾಗ ಮಾರ್ಗ ಮಧ್ಯೆ ಕಾರ್ಯ ನಿಮಿತ್ತ ವಿಧಾನಸೌಧಕ್ಕೆ ಬಂದಾಗ ಪೊಲೀಸರ ತಪಾಸಣೆಯ ವೇಳೆ ಹಣ ಪತ್ತೆಯಾಗಿತ್ತು.
ವಿಚಾರಣೆ ವೇಳೆ ಜಗದೀಶ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಚೆಕ್ ಬೌನ್ಸ್ ಹಾಗೂ ಬ್ಯಾಂಕ್‌ನ ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಇದರ ಜತೆಗೆ ಜಗದೀಶ್‌ಗೆ ಸಾಲವಾಗಿ ಹಣ ನೀಡಿದವರ ಹೇಳಿಕೆ ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ಪ್ರಕರಣಕ್ಕೆ ಅಂತ್ಯ ಹಾಡಲಿದ್ದಾರೆ ಎನ್ನಲಾಗಿದೆ.
ಅಂದು 10 ಲಕ್ಷ ರೂ. ನಗದು ಪತ್ತೆಯಾಗಿತ್ತು: ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಜಗದೀಶ್ ಜನವರಿ 4ರಂದು ಸಂಜೆ ವಿಧಾನಸೌಧದ ಪಶ್ಚಿಮ ದ್ವಾರದ ಮುಖಾಂತರ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಪೊಲೀಸರು ಕಾರನ್ನು ತಪಾಸಣೆ ಮಾಡಿದಾಗ 10 ಲಕ್ಷ ರೂ. ನಗದು ಪತ್ತೆಯಾಗಿತ್ತು.
ಈ ವೇಳೆ ಆ ಹಣವನ್ನು ಜಪ್ತಿ ಮಾಡಿದ್ದ ಪೊಲೀಸರು, ಹಣದ ಮೂಲದ ಕುರಿತಾಗಿ ಪ್ರಶ್ನಿಸಿದಾಗ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ಜಗದೀಶ್ ನೀಡಿರಲಿಲ್ಲ. ಈ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.