ದಾವಣಗೆರೆ: ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಆಡಳಿತದಲ್ಲಿ ಕಮಿಷನ್ ಪ್ರಮಾಣ ಮಾತ್ರ ಡಬಲ್ ಆಗಿದ್ದು, ಜನಪರ ಹಾಗೂ ಶೂನ್ಯ ಪರ್ಸೆಂಟ್ ಆಡಳಿತಕ್ಕಾಗಿ ಆಮ್ ಆದ್ಮಿ ಪಾರ್ಟಿಯ ಹೊಸ ಇಂಜಿನ್ ಸರ್ಕಾರವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರೆ ನೀಡಿದರು.
ಇಂದು ದಾವಣಗೆರೆಯಲ್ಲಿ ಆಯೋಜಿಸಿದ್ದ ಆಮ್ ಆದ್ಮಿ ಪಾರ್ಟಿಯ ಬೃಹತ್ ಸಮಾವೇಶದಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಅರವಿಂದ್ ಕೇಜ್ರಿವಾಲ್, “ನಮಸ್ಕಾರ ಕರ್ನಾಟಕ. ಕರ್ನಾಟಕದ ಹೃದಯ ಭಾಗ ದಾವಣಗೆರೆ. ಇಲ್ಲಿ ಬಂದಿದ್ದು ನನಗೆ ತುಂಬಾ ಸಂತೋಷವಾಗಿದೆ” ಎಂದು ಕನ್ನಡದಲ್ಲೇ ಹೇಳಿದರು.
ಕರ್ನಾಟಕದ ಜನರು ಬಹಳ ಒಳ್ಳೆಯವರು ಹಾಗೂ ದೇಶಭಕ್ತಿ ಉಳ್ಳವರು. ಆದರೆ ಇಲ್ಲಿನ ಜನಪ್ರತಿನಿಧಿಗಳು ಕೆಟ್ಟವರಾಗಿದ್ದಾರೆ. ಕರ್ನಾಟಕದ ಸರ್ಕಾರವು 40% ಸರ್ಕಾರವೆಂಬ ಮಾತು ಪ್ರಚಲಿತದಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ 40% ಕಮಿಷನ್ ನೀಡದೇ ಸರ್ಕಾರದ ಯಾವುದೇ ಗುತ್ತಿಗೆ ಕಾಮಗಾರಿ ನಡೆಯುತ್ತಿಲ್ಲವೆಂದು ಗುತ್ತಿಗೆದಾರರ ಸಂಘವೇ ಹೇಳುತ್ತಿದೆ.
ಆದರೆ ಬಿಜೆಪಿಯ ಅಮಿತ್ ಶಾ ಅವರು ಇಲ್ಲಿಗೆ ಬಂದು ಭ್ರಷ್ಟರಹಿತ ಆಡಳಿತ ನೀಡುವುದಾಗಿ ಹೇಳುತ್ತಿದ್ದಾರೆ. ಇದೇ ಜಿಲ್ಲೆಯ ಹಾಗೂ ಅಮಿತ್ ಶಾ ಅವರ ಪಕ್ಷದ ಶಾಸಕ ಹಾಗೂ ಅವರ ಮಗನ ಬಳಿ ಲೋಕಾಯುಕ್ತ ಅಧಿಕಾರಿಗಳಿಗೆ 8 ಕೋಟಿ ರೂಪಾಯಿ ನಗದು ದೊರೆತಿದೆ. ಶಾಸಕರನ್ನು ಈವರೆಗೂ ಬಂಧಿಸದ ಸರ್ಕಾರಕ್ಕೆ ಪದ್ಮಭೂಷಣ ನೀಡಬೇಕು ಎಂದು ವ್ಯಂಗ್ಯವಾಡಿದರು.
ದೆಹಲಿ ಸರ್ಕಾರದ ಸಚಿವ ಮನೀಶ್ ಸಿಸೋಡಿಯಾ ಅವರ ಮನೆ, ಕಚೇರಿ, ಬ್ಯಾಂಕ್ ಲಾಕರ್ ಮೇಲೆ ಕೇಂದ್ರ ಸರ್ಕಾರದ ಸಂಸ್ಥೆಗಳು ದಾಳಿ ಮಾಡಿದವು. ಅಲ್ಲಿ ಕೇವಲ ಹತ್ತು ಸಾವಿರ ರೂಪಾಯಿ ಹಣ ಸಿಕ್ಕಿತು. ಆದರೆ ಅವರ ಮೇಲೆ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದಾರೆ ಎಂಬ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ.
ಜನರಿಗೆ ಸತ್ಯ ಹೇಳಬೇಕು ಎಂದರೆ ಭ್ರಷ್ಟಾಚಾರ, ಅತ್ಯಾಚಾರ, ಲಂಚ ಕೇಳುವ, ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವವರು, ಮೋಸ, ವಂಚನೆ ಮಾಡುವವರು ಬಿಜೆಪಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಮೊದಲು ಶೇಕಡಾ 20ರಷ್ಟು ಕಮಿಷನ್ ಪಡೆಯುವ ಸರ್ಕಾರವಿತ್ತು. ಪ್ರಧಾನಿ ಮೋದಿಯವರು 2018ರಲ್ಲಿ ಕರ್ನಾಟಕಕ್ಕೆ ಆಗಮಿಸಿ, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಭ್ರಷ್ಟಾಚಾರಕ್ಕೆ ಅಂತ್ಯಹಾಡುವುದಾಗಿ ಹೇಳಿದರು. ಆದರೆ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಮಿಷನ್ ಡಬಲ್ ಆಯಿತು ಎಂದಿ ಕಿರಿಕಾರಿದರು.
ಇನ್ನು ಈಗ 40% ಕಮಿಷನ್ ಪಡೆಯಲಾಗುತ್ತಿದ್ದು, ಬಿಜೆಪಿ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ ಕಮಿಷನ್ ಮತ್ತೆ ಡಬಲ್ ಆಗಿ 80% ತಲುಪಲಿದೆ. ಆದ್ದರಿಂದ ಜನರು ಡಬಲ್ ಇಂಜಿನ್ ಸರ್ಕಾರದ ಬದಲು ಆಮ್ ಆದ್ಮಿ ಪಾರ್ಟಿಯ ಹೊಸ ಇಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಷ್ಟಾಚಾರದ ವಿರುದ್ಧ ದನಿ ಎತ್ತಿದವರನ್ನೇ ಬಂಧಿಸುವ ಸರ್ಕಾರ: ಕಳೆದ ಎರಡು ವರ್ಷಗಳಲ್ಲಿ 40% ಕಮಿಷನ್ ನೀಡದೇ ಸರ್ಕಾರದ ಯಾವುದೇ ಗುತ್ತಿಗೆ ಕಾಮಗಾರಿ ನಡೆಯುತ್ತಿಲ್ಲವೆಂದು ಗುತ್ತಿಗೆದಾರರ ಸಂಘವೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ. ಆದರೆ ಪ್ರಧಾನಿಯಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಮಿಷನ್ ಪಡೆದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಯಾವುದೇ ಶಿಕ್ಷೆ ವಿಧಿಸಿಲ್ಲ. ಬದಲಾಗಿ, ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ 82 ವರ್ಷದ ಕೆಂಪಣ್ಣ ಅವರನ್ನೇ ಬಂಧಿಸಿದರು.
ಅಂದರೆ, ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದವರನ್ನೇ ಬಂಧಿಸುವ ಇದು ಎಂತಹ ಸರ್ಕಾರ? ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರು ಕಮಿಷನ್ ದಂಧೆಯಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಿ, ಅನೇಕ ನಾಯಕರು ಹಾಗೂ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಕೊನೆಗೆ ಆತ್ಮಹತ್ಯೆ ಮಾಡಿಕೊಂಡರು ಎಂದು ಅರವಿಂದ್ ಕೇಜ್ರಿವಾಲ್ ಸರ್ಕಾರದ ನಡೆಯ ವಿರುದ್ಧ ಅಸಮಾಧಾನ ಹೊರಹಾಕಿದರು.
ರಾಜ್ಯ ಸರ್ಕಾರದ ಕಮಿಷನ್ ದಂಧೆಯಿಂದಾಗಿ ಶಾಲೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ಕೂಡ ಆರೋಪಿಸುತ್ತಿವೆ. ಸರ್ಕಾರದಿಂದ ಅನುದಾನ ಪಡೆಯಲು 30% ಕಮಿಷನ್ ನೀಡಬೇಕಾಗಿದೆ ಎಂದು ಹಿಂದೂ ಮಠಗಳು ಆರೋಪಿಸಿವೆ. ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ರಸ್ತೆಗಳನ್ನು ದುರಸ್ತಿ ಹಾಗೂ ನಿರ್ವಹಣೆಗೆ 20,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇತ್ತೀಚೆಗೆ 6000 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆದರೆ ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದಾಗಿ 100ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇನ್ನು ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಾರೆಂದು 34 ಕೋಟಿ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಿಸಲಾಯಿತು. ಆದರೆ ಕೇವಲ 24 ಗಂಟೆಗಳೊಳಗೆ ರಸ್ತೆಯು ಕುಸಿದು ಗುಂಡಿ ಬಿದ್ದಿತು.
ಶಾಸಕರು ಕೂಡ ಮಾರಾಟದ ಸರಕು: ಇನ್ನು ಕರ್ನಾಟಕದ ಯುವಕರು ಉದ್ಯೋಗವನ್ನು ಹಣಕೊಟ್ಟು ಖರೀದಿಸಬೇಕಾಗಿದೆ. 50 ಲಕ್ಷದಿಂದ 1 ಕೋಟಿ ರೂಪಾಯಿ ತನಕ ಹಣ ನೀಡಿದವರಿಗೆ ಪಿಎಸ್‌ಐ ಹುದ್ದೆಗಳನ್ನು ಮಾರಾಟ ಮಾಡಲಾಗಿದೆ. ಉಪನ್ಯಾಸಕರಾಗಲು 25 ಲಕ್ಷ ರೂಪಾಯಿ ನೀಡಬೇಕಾಗಿದೆ. ಶಾಸಕರು ಕೂಡ ಮಾರಾಟದ ಸರಕಾಗಿದ್ದು, ಆಪರೇಷನ್ ಕಮಲ ಹೆಸರಿನಲ್ಲಿ ಅವರನ್ನು ಖರೀದಿಸಿಯೇ ಬಿಜೆಪಿ ಸರ್ಕಾರವನ್ನು ರಚಿಸಲಾಗಿದೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
“ಕರ್ನಾಟಕದಲ್ಲಿ ವಿದ್ಯುತ್, ನೀರು, ಆರೋಗ್ಯ, ಗುಣಮಟ್ಟದ ಶಿಕ್ಷಣ, ಮಹಿಳೆಯರಿಗೆ ಸಾರಿಗೆ ಉಚಿತವಾಗಿ ಇಲ್ಲದಿದ್ದರೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಕಳೆದ ಐದು ವರ್ಷಗಳಲ್ಲಿ 3 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿವೆ. ಜನರಿಗೆ ಉಚಿತ ಕೊಡುಗೆ ನೀಡುವ ಬದಲು ಅವರ ತಲೆ ಮೇಲೆ ಸಾಲದ ಹೊರೆ ಹೊರಿಸಿವೆ. ದೆಹಲಿಯಲ್ಲಿ ಇವೆಲ್ಲ ಉಚಿತವಾಗಿದ್ದರೂ ಅಲ್ಲಿನ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಆಮ್ ಆದ್ಮಿ ಪಾರ್ಟಿಯು ಜೀರೋ ಕಮಿಷನ್ ಆಡಳಿತ ನೀಡುತ್ತಿರುವುದರಿಂದ ಇವೆಲ್ಲ ಸಾಧ್ಯವಾಗಿದೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
“ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರರಹಿತ ಆಡಳಿತ ನೀಡಲಾಗುತ್ತದೆ. ಪಂಜಾಬ್‌ನಲ್ಲಿ ನಮ್ಮದೇ ಪಕ್ಷದ ಇಬ್ಬರು ನಾಯಕರು ತಪ್ಪು ಮಾಡಿರುವುದು ಕಂಡುಬಂದಾಗಿ ಶೀಘ್ರವೇ ಅವರನ್ನು ಅಧಿಕಾರದಿಂದ ವಜಾ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಭ್ರಷ್ಟಾಚಾರದ ವಿಷಯದಲ್ಲಿ ನಾವು ಜೀರೋ ಟಾಲರೆನ್ಸ್ ಹೊಂದಿದ್ದೇವೆ. ಯಾರೇ ಭ್ರಷ್ಟಾಚಾರ ಮಾಡಿದರೂ ಸಹಿಸುವ ಪ್ರಶ್ನೆಯೇ ಇಲ್ಲ. ನಮ್ಮ ಮಕ್ಕಳು ತಪ್ಪು ಮಾಡಿದರೂ ಅವರನ್ನು ಕೂಡ ಜೈಲಿಗೆ ಕಳಿಸದೆ ನಾವು ಬಿಡುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.