ದಾವಣಗೆರೆ: ಅಧಿಕಾರ ದುರ್ಬಳಕೆ ಮಾಡಿಕೊಂಡು ಆಮ್ ಆದ್ಮಿ ಪಾರ್ಟಿ ನಾಯಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರವು ಬಿಜೆಪಿ ಶಾಸಕರೊಬ್ಬರ ಪುತ್ರನ ಬಳಿ ಕಂತೆಕಂತೆ ಹಣ ಸಿಕ್ಕರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಶ್ನಿಸಿದ್ದಾರೆ.
ಇಂದು ದಾವಣಗೆರೆಯಲ್ಲಿ ನಡೆದ ಆಮ್ ಆದ್ಮಿ ಪಾರ್ಟಿ ಸಮಾವೇಶದಲ್ಲಿ ಮಾತನಾಡಿದ ಭಗವಂತ್ ಮಾನ್, “ದೆಹಲಿ ಸರ್ಕಾರದ ಸಚಿವ ಮನೀಷ್ ಸಿಸೋಡಿಯಾ ಅವರು ಅತ್ಯುತ್ತಮವಾಗಿ ಸರ್ಕಾರಿ ಶಾಲೆಗಳನ್ನು ನವೀಕರಿಸಿದರು. ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ವಿಶ್ವವೇ ದೆಹಲಿಯ ಸರ್ಕಾರಿ ಶಾಲೆಗಳತ್ತ ತಿರುಗಿ ನೋಡುವಂತೆ ಮಾಡಿದರು.
ಆದರೆ, ಇದನ್ನು ಸಹಿಸದೇ ಸಿಬಿಐ ಮೂಲಕ ಅವರನ್ನು ಬಂಧಿಸಲಾಗಿದೆ. ನಾವು ಸಿಬಿಐ, ಇಡಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂಬುದನ್ನು ಬಿಜೆಪಿ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಲ್ಲಿನ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬರ ಅಕೌಂಟ್‌ಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಭರವಸೆ ನೀಡಿದ್ದರು. ಅದು ಇದುವರೆಗೆ ಈಡೇರಿಲ್ಲ. ಭ್ರಷ್ಟಾಚಾರದ ವಿರುದ್ಧ ನಾವು ಸಮರ ಸಾರಿದ್ದೇವೆ. ಈ ನಿಟ್ಟಿನಲ್ಲಿ ಪಂಜಾಬ್ ಹಾಗೂ ದೆಹಲಿಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ತೆರಿಗೆ ಕಟ್ಟುವಂತಹ ದುಸ್ಥಿತಿಯಲ್ಲಿ ದೇಶದ ಜನರಿದ್ದಾರೆ. ಜನಪರ ಆಡಳಿತ ನೀಡುತ್ತಿರುವ ಕೇಜ್ರಿವಾಲ್ ಜನಪ್ರಿಯತೆ ಸಹಿಸದೇ ಬಿಜೆಪಿಯು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮಾನ್ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಕಳ್ಳರ ಪಕ್ಷಗಳು. ಈ ಪಕ್ಷಗಳಿಂದ ಅಭಿವೃದ್ಧಿ ಅಸಾಧ್ಯ. ರಾಜ್ಯ ಲೂಟಿ ಹೊಡೆಯುವುದರಲ್ಲಿ ನಿರತವಾಗಿರುವ ಈ ಪಕ್ಷಗಳಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ, ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ಇನ್ನು ಪಂಜಾಬ್ ಸರ್ಕಾರವು ಯಾವ ಭ್ರಷ್ಟರನ್ನೂ ಬಿಡುತ್ತಿಲ್ಲ. ಮಾಹಿತಿ ಮತ್ತು ದಾಖಲೆ ಸಿಕ್ಕ ತಕ್ಷಣವೇ ಜೈಲಿಗಟ್ಟುವ ಕೆಲಸ ಮಾಡಿದ್ದೇವೆ. ದೆಹಲಿಯಲ್ಲಿ ನಾವೇನು ಮಾಡಿದ್ದೇವೆ ಎಂಬುದು ಜನರಿಗೆ ಗೊತ್ತಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಪ್ರಾಮಾಣಿಕ ಸರ್ಕಾರ ಕೊಟ್ಟಂತೆ ಇಲ್ಲಿಯೂ ಕೊಡುತ್ತೇವೆ ಎಂದು ಭಗವಂತ್ ಮಾನ್ ಹೇಳಿದರು.