ಮೈಸೂರು: ಕಬ್ಬಿನ ಹೆಚ್ಚುವರಿ 150 ರೂ. ಆದೇಶ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವ ಕಾರಣ, ಜಿಲ್ಲಾಧಿಕಾರಿಗಳೇ ಸ್ವತಃ 10ನೇ ತಾರೀಖಿನ ಒಳಗಾಗಿ ಕಾನೂನು ಸಂಬಂಧ ರಾಜ್ಯ ಅಡ್ವೋಕೇಟ್ ಜನರಲ್ ಹಾಗೂ ಸಕ್ಕರೆ ಅಭಿವೃದ್ಧಿ ಆಯುಕ್ತರನ್ನು ಭೇಟಿಮಾಡಿ ಚರ್ಚಿಸಿ, ಸರ್ಕಾರದ ಆದೇಶ ಪಾಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದರು.
ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮದೇ ಅಧ್ಯಕ್ಷತೆಯಲ್ಲಿ ಎರಡು ತಾಸುಗಳು ನಡೆದ ರೈತ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ರಸಗೊಬ್ಬರ ಸಮಸ್ಯೆ, ಬಿತ್ತನೆ ಬೀಜದ ಸಮಸ್ಯೆ, ಬಾರದಂತೆ ತಡೆಗಟ್ಟಲು ಪ್ರತಿ ಎರಡು ತಿಂಗಳಿಗೊಮ್ಮೆ ರಹದಾರಿ (ಪರವಾನಗಿ) ಹೊಂದಿದ ರಸಗೊಬ್ಬರ ಮಾರಾಟಗಾರರು, ರೈತ ಪ್ರತಿನಿಧಿಗಳ ಸಭೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ಸರ್ಕಾರ ಆದೇಶ ಮಾಡಿರುವ ಹೆಚ್ಚುವರಿ ಒಂದು ಟನ್ ಕಬ್ಬಿಗೆ 150 ರೂ.ಗಳನ್ನು ಬನ್ನಾರಿ ಸಕ್ಕರೆ ಕಾರ್ಖಾನೆ ಅವರು ಕಾರ್ಖಾನೆಯ ಉಪ ಉತ್ಪನ್ನಗಳ ಲಾಭದಲ್ಲಿ ರೈತರ ಹಿತದೃಷ್ಟಿಯಿಂದ ಕೊಡುವುದು ಸೂಕ್ತ ಎಂದು ಕಾರ್ಖಾನೆಯವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಗ್ಯಾಸ್ ಸಿಲೆಂಡರ್‌ಗಳನ್ನು ಗ್ರಾಮೀಣ ಭಾಗದಲ್ಲಿ ಗ್ಯಾಸ್ ಬೆಲೆಗಿಂತ ಹೆಚ್ಚುವರಿಯಾಗಿ 50 -100 ರೂ.ಗಳನ್ನು ಸುಲಿಗೆ ಮಾಡುತ್ತಿದ್ದು ಇದನ್ನು ತಪ್ಪಿಸಬೇಕು ಎಂದು ತಿಳಿಸಿದಾಗ 15 ಕಿಲೋಮೀಟರ್ ತನಕ ಹೆಚ್ಚುವರಿ ಹಣ ಪಡೆಯಬಾರದು ಎಂದು ಆದೇಶ ಹೊರಡಿಸಲು ತೀರ್ಮಾನಿಸಿದ್ದು, ಉಲ್ಲಂಘನೆ ಮಾಡಿದರೆ ಸಂಬಂಧಪಟ್ಟ ಗ್ಯಾಸ್ ಪರವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಎಚ್ಚರಿಕೆ ನೀಡಿದರು.
ಎಪಿಎಂಸಿಯಲ್ಲಿ ಮಧ್ಯವರ್ತಿಗಳು ರೈತರಿಂದ ನೂರು ರೂಪಾಯಿಗೆ 10% ರಂತೆ ಕಮಿಷನ್ ಪಡೆಯುತ್ತಿದ್ದಾರೆ. ಇನ್ನು ಬಾಳೆಕಾಯಿ ಮಂಡಿ ಮತ್ತು ಹೂವಿನ ಮಂಡಿ ಎಪಿಎಂಸಿ ಆವರಣದಲ್ಲಿ ಸಿದ್ಧತೆಗೊಂಡಿದ್ದರು ಸಹ ಈ ಎರಡು ಇನ್ನೂ ಸ್ಥಳಾಂತರವಾಗದೆ ಖಾಲಿ ಬಿದ್ದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದಾಗ ಒಂದು ತಿಂಗಳ ಒಳಗಾಗಿ ವರ್ಗಾಯಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ರೈತರ ಬ್ಯಾಂಕ್‌ನ ಸಮಸ್ಯೆಗಳ ಬಗ್ಗೆ ದೂರು ಬರದಂತೆ ತಡೆಗಟ್ಟಲು ಜಿಲ್ಲಾ ಬ್ಯಾಂಕ್ ಮಾರ್ಗದರ್ಶಿ ಬ್ಯಾಂಕ್ ಸಭೆಗೆ ಪ್ರತಿ ಸಂಘಟನೆಯಿಂದ ರೈತ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು, ಸಮಸ್ಯೆಗಳನ್ನು ಪಟ್ಟಿ ಮಾಡಿ ಬಂದು ಸಭೆಯಲ್ಲಿ ತಿಳಿಸಬೇಕು ಎಂದು ತೀರ್ಮಾನಿಸಲಾಯಿತು.
ಕಂದಾಯ ಉಪವಿಭಾಗಾಧಿಕಾರಿ ಕಮಲಾಬಾಯಿ, ಆಹಾರ ಜಂಟಿ ನಿರ್ದೇಶಕಿ ಕುಮುದಾ, ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್, ಅರಣ್ಯ ಇಲಾಖೆ ಡಿಎಫ್ ಬಸವರಾಜ್, ವಿದ್ಯುತ್ ಇಲಾಖೆಯ ಮುಖ್ಯ ಇಂಜಿನಿಯರ್, ಲೀಡ್ ಬ್ಯಾಂಕ್ ಮುಖ್ಯಸ್ಥರು, ಬಣ್ಣಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಸತೀಶ್ ಕುಮಾರ್.
ರೈತ ಮುಖಂಡರಾದ ಕುರುಬೂರ್ ಶಾಂತಕುಮಾರ್ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಕುರುಬೂರು ಸಿದ್ದೇಶ್, ಲಕ್ಷ್ಮಿಪುರ ವೆಂಕಟೇಶ್, ಹಂಪಾಪುರ ರಾಜೇಶ್, ಆದಿಬೆಟ್ಟಹಳ್ಳಿ ನಂಜುಂಡಸ್ವಾಮಿ, ಕುರುಬೂರು ಪ್ರದೀಪ್, ಕಾಟೂರು ಮಹದೇವಸ್ವಾಮಿ, ಮುದ್ದಳ್ಳಿ ಶಿವಣ್ಣ, ಪಿ.ರಾಜು, ಪಾಳ್ಯ ಸ್ವಾಮಿ, ಯಾಕನೂರು ನಾಗೇಂದ್ರ, ಸಿದ್ದರಾಮ, ಮಂಜುನಾಥ್, ನೀಲಕಂಠಪ್ಪ ನಂಜುಂಡಸ್ವಾಮಿ, ಉಡಿಗಾಲ ಮಾದೇವಸ್ವಾಮಿ ಇದ್ದರು.