ಬೆಂಗಳೂರು : ಬಿಜೆಪಿಯಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಲಾಗುತ್ತಿದೆ ಆದರೆ ಒಳಗಡೆ ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇದೆ. ಅದಕ್ಕೆ ನಿದರ್ಶನ ಎಂಬಂತೆ ಹಾಲಿ ಸಚಿವರಿಬ್ಬರ ನಡುವೆ ಶೀತಲ ಸಮರ ಏರ್ಪಟ್ಟಿದ್ದು, ಮುಸುಕಿನ ಗುದ್ದಾಟ ನಡೆಯುತ್ತಿದೆ.
ರಾಜ್ಯದ ಕಂದಾಯ ಸಚಿವ ಸಆರ್. ಅಶೋಕ್ ಮತ್ತು ವಸತಿ ವಿ.ಸೋಮಣ್ಣ ಮಧ್ಯೆ ಶೀತಲ ಸಮರ ಭಾರಿ ಜೋರಾಗೆ ನಡೆಯುತ್ತಿರುವುದು ನಾಗರಬಾವಿ ಬಳಿ ಆಯೋಜಿಸಿದ್ದ ವಿಜಯಸಂಕಲ್ಪ ರಥಯಾತ್ರೆ ಮೊಟಕುಗೊಳಿಸಿ ಪೂರ್ವ ಪಶ್ಚಿಮ ಎಂಬಂತೆ ಒಬ್ಬರಿಗೊಬ್ಬರು ಒಂದೊಂದು ದಿಕ್ಕಿಗೆ ತೆರಳಿದರು.
ಸಚಿವರಾದ ಆರ್.ಅಶೋಕ್ ಮತ್ತು ವಿ.ಸೋಮಣ್ಣ ಮಧ್ಯೆ ಗೊಂದಲ ಸೃಷ್ಟಿಯಾಗಿರುವುದು ಗುಟ್ಟಾಗೇನು ಉಳಿದಿಲ್ಲ. ಒಂದು ಕಡೆ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗುತ್ತಿದ್ದು, ಅದರ ಅಂಗವಾಗಿ ರಾಜ್ಯಾದ್ಯಂತ ವಿಜಯಸಂಕಲ್ಪ ಯಾತ್ರೆ ಮೂಲಕ ಮತದಾರರನ್ನು ಸೆಳೆಯಲು ಹಲವು ರೀತಿಯಲ್ಲಿ ಕಸರತ್ತು ನಡೆಸುತ್ತಿದೆ. ಈ ನಡುವೆ ಅಶೋಕ್ ಮತ್ತು ಸೋಮಣ್ಣ ಮಧ್ಯೆ ಗೊಂದಲ ಸೃಷ್ಟಿಯಾಗಿ ಪಕ್ಷಕ್ಕೆ ಭಾರಿ ಇರಿಸು ಮುರಿಸು ಉಂಟಾಗುತ್ತಿದೆ.
ವಿಜಯ ಸಂಕಲ್ಪ ರಥಯಾತ್ರೆ ನಾಗರಬಾವಿಯಿಂದ ನಾಯಂಡಹಳ್ಳಿವರೆಗೆ ನಿಗದಿಯಾಗಿತ್ತು. ನಾಯಂಡಹಳ್ಳಿವರೆಗೆ ರಥಯಾತ್ರೆಯಲ್ಲಿ ತೆರಳಲು ಅಶೋಕ್ ನಿರಾಕರಣೆ ಮಾಡಿದ್ದು, ಅವರ ನಡೆಗೆ ಸಚಿವ ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿ ಅರ್ಧಕ್ಕೆ ಯಾತ್ರೆ ಮೊಟಕು ಮಾಡಿ ವಾಪಾಸ್ ಆಗಿದ್ದಾರೆ.
ಇನ್ನು ಈ ಇಬ್ಬರ ನಡುವೆ ವಾಗ್ವಾದ ನಡೆದಿದ್ದು ಕಾರ್ಯಕರ್ತರಲ್ಲಿ ಗೊಂದಲವೂ ಸೃಷ್ಟಿಯಾಗಿತ್ತು. ಸೋಮಣ್ಣ ಇತ್ತೀಚೆಗೆ ಬಿಜೆಪಿ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ವಿಜಯಸಂಕಲ್ಪ ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಸ್ವತಃ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಿ.ಸೋಮಣ್ಣ ಅವರೇ ಈ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡುವುದಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬಂದಿದ್ದರೂ ಸೋಮಣ್ಣ ಗೈರಾಗಿದ್ದು ಜಿಲ್ಲೆಯ ಕಾರ್ಯಕರ್ತರು ಸೇರಿದಂತೆ ಮುಖಂಡರ ಅಚ್ಚರಿಗೂ ಕಾರಣವಗಿತ್ತು.