ಧಾರವಾಡ: ಕೊರೊನಾ ವೈರಸ್ ನಿಯಂತ್ರಣಕ್ಕೆ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಹೋಟೆಲ್, ಖಾನಾವಳಿ, ರೆಸ್ಟೊರೆಂಟ್‍ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಮಾಲೀಕರು ಮತ್ತು ನಿರ್ವಾಹಕರು ಹೆಚ್ಚು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಲಸಗಾರರು ಶುಚಿತ್ವದಿಂದ ಗ್ರಾಹಕರಿಗೆ ಸೇವೆ ನೀಡುವುದನ್ನು ಮಾಲೀಕರು ಖಚಿತಪಡಿಸಿಕೊಳ್ಳಬೇಕು. ಎಂದರು.
ವಿದೇಶಗಳಿಂದ ಜಿಲ್ಲೆಗೆ ಆಗಮಿಸುವ ಜನರು ಸ್ವಯಂ ಪ್ರೇರಿತರಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ವರದಿ ಮಾಡಿಕೊಳ್ಳಬೇಕು. ಮನೆಗಳಲ್ಲಿ ಪ್ರತ್ಯೇಕವಾಗಿ ನಿಗಾ ಇರಿಸಲ್ಪಟ್ಟಿರುವವರು ತಮ್ಮ ಪ್ರತ್ಯೇಕತೆಯನ್ನು
ಅನುಸರಿಸಬೇಕು. ಸರ್ಕಾರದ ನಿರ್ದೇಶನ ಉಲ್ಲಂಘಿಸಿದರೆ ಎಪಿಡೆಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಕೊರೊನಾ ವಿರುದ್ಧ ಜನಾಂದೋಲನ ರೂಪಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನಜಾಗೃತಿಗಾಗಿ ಕರೆ ನೀಡಿರುವ ಭಾನುವಾರದ ಜನತಾ ಕಫ್ರ್ಯೂ ಯಶಸ್ವಿಗೊಳಿಸಬೇಕು. ಸಾರ್ವಜನಿಕರು ಅಂದು ಸ್ವಇಚ್ಛೆಯಿಂದ ಮನೆಗಳಿಂದ ಹೊರಬರದೇ ಸಂಪೂರ್ಣವಾಗಿ ಸಹಕಾರ ನೀಡಬೇಕು ಎಂದು ತಿಳಿಸಿದರು.
ಹೋಟೆಲ್‍ಗಳು ಹಾಗೂ ಊಟ -ಉಪಾಹಾರ ಪೂರೈಸುವ ಎಲ್ಲಾ ವ್ಯಾಪಾರಿಗಳು ಶುಚಿತ್ವಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಅಡುಗೆ ತಯಾರಿಕೆ, ಬಳಸುವ ಪಾತ್ರೆಗಳು, ನೀರು, ಪದಾರ್ಥಗಳು, ಕೆಲಸಗಾರರು ಮುಂತಾದ ಎಲ್ಲ ವಿಷಯಗಳಲ್ಲಿ ಎಚ್ಚರ ವಹಿಸಿ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸೇವೆ ನೀಡಬೇಕು. ಪಾತ್ರೆ ತೊಳೆಯಲು ಬಿಸಿನೀರು ಬಳಸಬೇಕು. ಗ್ರಾಹಕರಿಗೆ ಕುಡಿಯಲು ಪ್ರತ್ಯೇಕವಾಗಿ ಬಿಸಿನೀರು ಕೊಡಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ವಿಚಕ್ಷಣೆ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಗೆ ವಿದೇಶಗಳಿಂದ ಆಗಮಿಸುವ ನಾಗರಿಕರು ಸ್ವಯಂ ಪ್ರೇರಿತರಾಗಿ ಜಿಲ್ಲಾಡಳಿತಕ್ಕೆ ತಮ್ಮ ಪ್ರವಾಸದ ಹಿನ್ನೆಲೆ ಮತ್ತು ಆರೋಗ್ಯದ ಬಗ್ಗೆ ಜಿಲ್ಲಾಡಳಿತಕ್ಕೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಒದಗಿಸಬೇಕು. ಈಗಾಗಲೇ ಮನೆಗಳಲ್ಲಿ ಪ್ರತ್ಯೇಕವಾಗಿ ನಿಗಾ ಇರಿಸಲ್ಪಟ್ಟವರು ಯಾವುದೇ ಕಾರಣಕ್ಕೂ ತಮ್ಮ ಕುಟುಂಬದ ಇತರ ಸದಸ್ಯರು ಹಾಗೂ ನೆರೆ ಹೊರೆಯವರೊಂದಿಗೆ ಸಂಪರ್ಕಕ್ಕೆ ಬರಬಾರದು. ಈ ವಿಷಯದಲ್ಲಿ ಸರ್ಕಾರದ ನಿರ್ದೇಶನ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಎಪಿಡೆಮಿಕ್ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದರು.