ವಿಜಯಪುರ: ನಮ್ಮ ಸರ್ಕಾರದ ಕೆಲಸಗಳೇ ನಮ್ಮ ಗ್ಯಾರಂಟಿ, ಮೋಸ ಮಾಡೋದು ಸುಳ್ಳು ಆಶ್ವಾಸನೆ ನೀಡೋದು ಗ್ಯಾರಂಟಿ ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜಿಲ್ಲೆ ಮುದ್ದೆಬಿಹಾಳ ತಾಲೂಕಿನ ನಾಲತವಾಡದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ನಾವು ಕಿತ್ತೂರು ಕರ್ನಾಟಕ ಮಂಡಳಿ ರಚನೆ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ನಮ್ಮ ಸರ್ಕಾರದ ಕೆಲಸಗಳೇ ನಮ್ಮ ಗ್ಯಾರಂಟಿ. ಮೋಸ ಮಾಡೋದು ಸುಳ್ಳು ಆಶ್ವಾಸನೆ ನೀಡೋದು ಗ್ಯಾರಂಟಿ ಅಲ್ಲ. ಕಾಂಗ್ರೆಸ್‌ನ ಗ್ಯಾರಂಟಿ ನಂಬೋಕೆ ಇದು ಛತ್ತೀಸ್ ಘಡ, ರಾಜಸ್ತಾನ ಅಲ್ಲ. ಇದು ಕರ್ನಾಟಕ. ಕರ್ನಾಟಕದ ಜನತೆ ಬಹಳ ಜಾಣರಿದ್ದಾರೆ ಎಂದು ಹೇಳಿದರು.
ಕೃಷ್ಣೇಯ ಮೇಲೆ ಅಣೆ ಮಾಡಿ ಅಧಿಕಾರಕ್ಕೆ ಬಂದರು. ಕೃಷ್ಣಾ ಯೋಜನೆಗೆ ವರ್ಷಕ್ಕೆ 10 ಸಾವಿರ ಕೋಟಿ ರೂ.ಗಳನ್ನು ಕೊಡ್ತೇವೆ ಎಂದರು, ಈಗ ನೀವು ಕೊಟ್ಟಿರೋದು 6 ಸಾವಿರ ಕೋಟಿ ರೂ. ಮಾತ್ರ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್‌ಗೆ ಬೊಮ್ಮಾಯಿ ಪರೋಕ್ಷವಾಗಿ ಟಾಂಗ್ ನೀಡಿದರು.
ಇನ್ನು ಮುದ್ದೆ ಬಿಹಾಳ ಮಾದರಿಯಲ್ಲೇ ಎಲ್ಲ ಕ್ಷೇತ್ರಗಳ ಅಭಿವೃದ್ದಿ ಮಾಡಲಾಗುತ್ತದೆ. ನಮ್ಮನ್ನು ಮತ್ತೊಮ್ಮೆ ಬೆಂಬಲಿಸಬೇಕು ಎಂದರು.